ಅಮೆರಿಕದ ಮತಯಂತ್ರಗಳನ್ನು ಸುಲಭವಾಗಿ ಹ್ಯಾಕ್ ಮಾಡಿದ ವಿಜ್ಞಾನಿ

Update: 2018-10-07 16:10 GMT

ವಾಶಿಂಗ್ಟನ್,ಅ.7: ಅಮೆರಿಕದಲ್ಲಿ ಬಳಸಲಾಗುವ ಮತಯಂತ್ರಗಳನ್ನು ಯಾವ ರೀತಿ ಸುಲಭವಾಗಿ ಹ್ಯಾಕ್ ಮಾಡಬಹುದು ಮತ್ತು ಯಾವುದೇ ಕುರುಹು ಬಿಡದೆ ಫಲಿತಾಂಶವನ್ನು ಬದಲಿಸಬಹುದು ಎಂಬುದನ್ನು ಕಂಪ್ಯೂಟರ್ ವಿಜ್ಞಾನಿ ಅಲೆಕ್ಸ್ ಹಲ್ಡರ್ಮನ್ ಕಳೆದ ತಿಂಗಳು ಬೋಸ್ಟನ್ ಸಮ್ಮೇಳನದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮತಯಂತ್ರ ಹ್ಯಾಕ್ ಮಾಡುವ ಪ್ರಾತ್ಯಕ್ಷಿಕೆ ನೀಡಲು ಅಲೆಕ್ಸ್ ನಕಲಿ ಮತದಾನವನ್ನು ನಡೆಸಿದ್ದರು. ಈ ವೇಳೆ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಮೂವರು ಜಾರ್ಜ್ ವಾಶಿಂಗ್ಟನ್‌ಗೆ ಮತ ಹಾಕಿದ್ದರು. ಆದರೆ ಮತಯಂತ್ರವನ್ನು ಹ್ಯಾಕ್ ಮಾಡಿದ ನಂತರ, ಕ್ರಾಂತಿಕಾರಿ ಯುದ್ಧದ ಸಮಯದಲ್ಲಿ ಮಿಲಿಟರಿ ರಹಸ್ಯಗಳನ್ನು ಮಾರಿದ್ದ ಸೇನಾಧಿಕಾರಿ ಬೆನೆಡಿಕ್ಟ್ ಅರ್ನಾಲ್ಡ್ ಈ ನಕಲಿ ಚುನಾವಣೆಯಲ್ಲಿ 2-1 ಅಂತರದಿಂದ ಜಯ ಗಳಿಸುವಂತೆ ಮಾಡಲಾಗಿತ್ತು. ಅಲೆಕ್ಸ್ ಹ್ಯಾಕ್ ಮಾಡಿ ತೋರಿಸಿದ ಮತಯಂತ್ರದ ಮಾದರಿಯನ್ನು ಈಗಲೂ ಅಮೆರಿಕದ 20 ರಾಜ್ಯಗಳಲ್ಲಿ ಬಳಸಲಾಗುತ್ತಿದೆ. ಇವುಗಳಲ್ಲಿ ತಾಂತ್ರಿಕ ಫಲಿತಾಂಶವನ್ನು ಹೋಲಿಸಬಲ್ಲ ಪೇಪರ್ ಬ್ಯಾಲೆಟ್‌ಗಳಿಲ್ಲ. ಹಾಗಾಗಿ ಒಟ್ಟಾರೆ ಮತ ಗಳಿಕೆಯನ್ನು ತಿರುಚಲಾಗಿದೆಯೇ ಎನ್ನುವುದನ್ನು ದೃಢಪಡಿಸಲು ಸಾಧ್ಯವಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಧ್ಯಂತರ ಚುನಾವಣೆಗಳು ಹತ್ತಿರವಾಗುತ್ತಿರುವುದರಿಂದ ಮತಯಂತ್ರಗಳನ್ನು ಹ್ಯಾಕ್ ಮಾಡುವ ಅಪಾಯಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಅಮೆರಿಕದ ಮತದಾನ ಪ್ರಕ್ರಿಯೆಯಲ್ಲಿ ರಶ್ಯಾ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಲಾದ ಯುಎಸ್ ರಾಷ್ಟ್ರೀಯ ಚುನಾವಣೆ ನಡೆದು ಎರಡು ವರ್ಷಗಳ ನಂತರ ಇದೀಗ ಮತ್ತೊಮ್ಮೆ ಅಮೆರಿಕ ಚುನಾವಣೆಗೆ ಸಜ್ಜಾಗುತ್ತಿದೆ. 2018ರ ಚುನಾವಣೆಯಲ್ಲಿ ಪೇಪರ್ ಬ್ಯಾಲೆಟ್‌ಗಳನ್ನು ಬಳಸಬೇಕು ಮತ್ತು 2020ರ ವೇಳೆಗೆ ಮಾನವ ಓದಬಲ್ಲ ಬ್ಯಾಲೆಟ್‌ಗಳನ್ನು ಉಪಯೋಗಿಸಬೇಕು ಎಂದು ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಸೆಪ್ಟಂಬರ್‌ನಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News