ಸರ್ಫಿಂಗ್ ವೇಳೆ ಅವಘಡ: ಟೆಸ್ಟ್ ಕ್ರಿಕೆಟ್ ದಿಗ್ಗಜ ಹೇಡನ್ ಬೆನ್ನುಹುರಿ ಮುರಿತ

Update: 2018-10-08 15:13 GMT

ಸಿಡ್ನಿ, ಅ.8: ಆಸ್ಟ್ರೇಲಿಯದ ಟೆಸ್ಟ್ ಕ್ರಿಕೆಟ್ ದಿಗ್ಗಜ ಮ್ಯಾಥ್ಯೂ ಹೇಡನ್ ಕ್ವೀನ್ಸ್‌ಲ್ಯಾಂಡ್‌ನಲ್ಲಿ ರಜಾಕಾಲದಲ್ಲಿ ಸರ್ಫಿಂಗ್ ನಡೆಸುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ತಲೆ, ಕುತ್ತಿಗೆ ಭಾಗಗಳಲ್ಲಿ ಗಾಯವಾಗಿದ್ದಲ್ಲದೆ, ಬೆನ್ನುಹುರಿ ಮುರಿದುಹೋಗಿದೆ.

ಕಳೆದ ವರ್ಷ ಆಸ್ಟ್ರೇಲಿಯದ ಕ್ರಿಕೆಟ್ ಹಾಲ್ ಫೇಮ್‌ಗೆ ಸೇರ್ಪಡೆಯಾಗಿದ್ದ ಮಾಜಿ ಅಗ್ರ ಕ್ರಮಾಂಕದ ದಾಂಡಿಗ ಹೇಡನ್ ಶುಕ್ರವಾರ ತನ್ನ ಪುತ್ರನೊಂದಿಗೆ ನಾರ್ತ್ ಸ್ಟ್ರಾಡ್‌ಬ್ರೊಕ್ ದ್ವೀಪದಲ್ಲಿ ಸರ್ಫಿಂಗ್ ನಡೆಸುತ್ತಿದ್ದಾಗ ಮರಳಿನ ದಿಬ್ಬಕ್ಕೆ ಹೋಗಿ ಅಪ್ಪಳಿಸಿದ್ದರು. ಢಿಕ್ಕಿ ಹೊಡೆದ ರಭಸಕ್ಕೆ ಕುತ್ತಿಗೆ ಸಮೀಪದ ಬೆನ್ನುಹುರಿ ಮುರಿದು ಹೋಗಿದ್ದು, ಹಣೆಗೂ ಗಾಯವಾಗಿದೆ.

46ರ ಹರೆಯದ ಹೇಡನ್ 103 ಟೆಸ್ಟ್ ಪಂದ್ಯಗಳನ್ನು ಆಡಿದ ಬಳಿಕ 2009ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

‘‘ಗಂಭೀರ ಗಾಯದಿಂದ ಪಾರಾಗಿರುವ ನಾನು ನಿಜಕ್ಕೂ ಅದೃಷ್ಟವಂತ. ಘಟನೆಯ ಬಳಿಕ ಬೀಚ್‌ನಿಂದ ವಾಪಸಾಗಿದ್ದೆ. ಸ್ಕಾನಿಂಗ್‌ನಲ್ಲಿ ಗಾಯದ ಪ್ರಮಾಣ ತಿಳಿಯಿತು’’ ಎಂದು ಬ್ರಿಸ್ಬೇನ್ ಕೊರಿಯರ್ ಮೇಲ್‌ಗೆ ಹೇಡನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News