ಇದ್ಲಿಬ್‌ನಿಂದ ಭಾರೀ ಶಸ್ತ್ರಾಸ್ತ್ರ ಹಿಂದಕ್ಕೆ ಪಡೆದುಕೊಂಡ ಬಂಡುಕೋರರು

Update: 2018-10-09 18:12 GMT

ಬೈರೂತ್, ಅ. 9: ಸಿರಿಯದ ಇದ್ಲಿಬ್ ಪ್ರಾಂತದ ಉದ್ದೇಶಿತ ತಟಸ್ಥ ವಲಯದ ಹಲವು ಭಾಗಗಳಿಂದ ಸಿರಿಯದ ಬಂಡುಕೋರ ಬಣಗಳು ಭಾರೀ ಶಸ್ತ್ರಾಸ್ತ್ರಗಳನ್ನು ಹಿಂದಕ್ಕೆ ಪಡೆದುಕೊಂಡಿವೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಸೋಮವಾರ ಹೇಳಿದೆ.

ಇದ್ಲಿಬ್ ಪ್ರಾಂತದ ಸೇನಾರಹಿತ ವಲಯದ ಹೆಚ್ಚಿನ ಭಾಗಗಳಿಂದ ಬೃಹತ್ ಶಸ್ತ್ರಾಸ್ತ್ರಗಳನ್ನು ಹಲವು ಗುಂಪುಗಳು ಹಿಂದಕ್ಕೆ ಪಡೆದುಕೊಂಡಿವೆ ಎಂದು ವೀಕ್ಷಣಾಲಯದ ಅಧ್ಯಕ್ಷ ರಮಿ ಅಬ್ದುಲ್ ರಹಮಾನ್ ತಿಳಿಸಿದರು.

ಇದ್ಲಿಬ್ ವಲಯವನ್ನು ಸುತ್ತುವರಿಯುವ 15-20 ಕಿ.ಮೀ. ಸೇನಾರಹಿತ ವಲಯದಿಂದ ಬೃಹತ್ ಶಸ್ತ್ರಾಸ್ತ್ರಗಳನ್ನು ಹಿಂದಕ್ಕೆ ಪಡೆಯಲು ಬುಧವಾರದವರೆಗೆ ಅವಕಾಶವಿದೆ.

ಸಿರಿಯದ ಮಿತ್ರ ದೇಶ ರಶ್ಯ ಮತ್ತು ಬಂಡುಕೋರರಿಗೆ ಬೆಂಬಲ ನೀಡುವ ಟರ್ಕಿ ನಡುವೆ ಕಳೆದ ತಿಂಗಳು ಏರ್ಪಟ್ಟ ಒಪ್ಪಂದವೊಂದರ ಪ್ರಕಾರ, ತಟಸ್ಥ ವಲಯವನ್ನು ನಿರ್ಮಿಸಬೇಕಾಗಿದೆ.

ಸಿರಿಯ ಅಧ್ಯಕ್ಷ ಬಶರ್ ಅಲ್-ಅಸ್ಸಾದ್‌ರ ಪಡೆಗಳು ಇದ್ಲಿಬ್ ಮೇಲೆ ಬೃಹತ್ ಪ್ರಮಾಣದಲ್ಲಿ ಪ್ರಹಾರಗೈಯುವುದನ್ನು ತಡೆಯಲು ತಟಸ್ಥ ವಲಯವನ್ನು ನಿರ್ಮಿಸಲಾಗಿದೆ.

ಸೇನೆ ತೊರೆದವರಿಗೆ ಕ್ಷಮೆ: ಅಸ್ಸಾದ್

ಸೇನೆಯನ್ನು ತೊರೆದು ಹೋದವರಿಗೆ ಸಿರಿಯ ಸರಕಾರ ಕ್ಷಮಾದಾನ ಘೋಷಿಸಿದೆ. ಅವರು ಯಾವುದೇ ಶಿಕ್ಷೆಯಿಲ್ಲದೆ ಕರ್ತವ್ಯಕ್ಕೆ ಸೇರ್ಪಡೆಗೊಳ್ಳಲು ಅದು ಹಲವಾರು ತಿಂಗಳ ಅವಕಾಶವನ್ನು ನೀಡಿದೆ.

ಸಿರಿಯದ ಒಳಗೆ ಅಥವಾ ಹೊರಗೆ ಸೇನೆಯನ್ನು ತೊರೆದು ಹೋದ ಎಲ್ಲರಿಗೂ ಈ ಕ್ಷಮಾದಾನ ಅನ್ವಯವಾಗುತ್ತದೆ ಎಂದು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಾಕಿದ ಸಂದೇಶದಲ್ಲಿ ಸಿರಿಯ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News