ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳಿಗೆ ಭಾರತ ತಂಡ ಪ್ರಕಟ

Update: 2018-10-11 15:44 GMT

ಹೈದರಾಬಾದ್, ಅ.11: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ಐದು ಪಂದ್ಯಗಳ ಏಕದಿನ ಅಂತರ್‌ರಾಷ್ಟ್ರೀಯ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದ್ದು, ಇಂಗ್ಲೆಂಡ್ ಮತ್ತು ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಿಷಭ್ ಪಂತ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯ ಅಕ್ಟೋಬರ್ 21ರಂದು ಗುವಾಹತಿಯಲ್ಲಿ ನಡೆಯಲಿದ್ದು, ರಿಷಭ್ ಪಂತ್ ಅವರು ದಿನೇಶ್ ಕಾರ್ತಿಕ್ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

 ಪಂತ್ 28 ‘ಎ ಲೀಸ್ಟ್ ಪಂದ್ಯಗಳಲ್ಲಿ ಈ ತನಕ 838 ರನ್ ಜಮೆ ಮಾಡಿದ್ದಾರೆ. 1 ಶತಕ ಮತ್ತು ಐದು ಅರ್ಧಶತಕಗಳನ್ನು ಜಮೆ ಮಾಡಿದ್ದಾರೆ.

 15 ಮಂದಿಯ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಮರಳಿದ್ದಾರೆ. ಏಶ್ಯಕಪ್ ಟೂರ್ನಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ವೇಗಿ ಮುಹಮ್ಮದ್ ಶಮಿ ವರ್ಷದ ಬಳಿಕ ಟೀಮ್ ಇಂಡಿಯಾಕ್ಕೆ ಮರಳಿದ್ದಾರೆ. ಶಮಿ 50 ಏಕದಿನ ಪಂದ್ಯಗಳಲ್ಲಿ 91 ವಿಕೆಟ್ ಗಳಿಸಿದ್ದಾರೆ.

 ಹಾರ್ದಿಕ್ ಪಾಂಡ್ಯ ಮತ್ತು ಕೇದಾರ್ ಜಾಧವ್ ಏಶ್ಯಕಪ್ ವೇಳೆ ಗಾಯಗೊಂಡು ಹೊರಗುಳಿದಿದ್ದರು. ಅವರನ್ನು ಎರಡು ಪಂದ್ಯಗಳಿಗೆ ತಂಡದ ಆಯ್ಕೆ ವೇಳೆ ಪರಿಗಣಿಸಲಾಗಿಲ್ಲ.

ಏಶ್ಯಕಪ್ ವೇಳೆ ಗಾಯಾಳು ಅಕ್ಷರ್ ಪಟೇಲ್ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದ ಆಲ್‌ರೌಂಡರ್ ರವೀಂದ್ರ ಜಡೇಜ ತಂಡದಲ್ಲಿ ಸ್ಥಾನ ಭದ್ರಪಡಿಸಿದ್ದಾರೆ. ಎಡಗೈ ವೇಗಿ ಖಲೀಲ್ ಅಹ್ಮದ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ ಕುಮಾರ್‌ಗೆ ವಿಶ್ರಾಂತಿ ನೀಡಲಾಗಿದೆ. ಇವರಿಬ್ಬರು ಏಶ್ಯಕಪ್‌ನಲ್ಲಿ ಆಡಿದ್ದರು. ಆದರೆ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ವಿಶ್ರಾಂತಿ ನೀಡಲಾಗಿತ್ತು. ಎರಡು ಏಕದಿನ ಪಂದ್ಯಗಳಿಗೆ ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ಮನೀಷ್ ಪಾಂಡೆ, ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್), ರಿಷಭ್ ಪಂತ್, ರವೀಂದ್ರ ಜಡೇಜ, ಯುಜುವೇಂದ್ರ ಚಹಾಲ್, ಕುಲ್ ದೀಪ್ ಯಾದವ್, ಮುಹಮ್ಮದ್ ಶಮಿ, ಖಲೀಲ್ ಅಹ್ಮದ್, ಶಾರ್ದುಲ್ ಠಾಕೂರ್, ಲೋಕೇಶ್ ರಾಹುಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News