ವೃತ್ತಿಪರ ಫುಟ್ಬಾಲ್ ಆಟಗಾರನಾಗಲಿರುವ ಓಟದ ರಾಜನಿಗೆ ಮೊದಲ ಯಶಸ್ಸು

Update: 2018-10-12 15:04 GMT

ಸಿಡ್ನಿ, ಅ.12: ಫುಟ್ಬಾಲ್ ಆಟಗಾರನಾಗಿ ಬದಲಾಗಿರುವ ಜಮೈಕಾದ ಒಟದ ರಾಜ ಉಸೇನ್ ಬೋಲ್ಟ್ ತನ್ನ ಮೊದಲ ಪಂದ್ಯದಲ್ಲಿ ಸೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್ ತಂಡದ ಪರ ಅವಳಿ ಗೋಲು ದಾಖಲಿಸಿದ್ದಾರೆ

  ಬೋಲ್ಟ್ ಶುಕ್ರವಾರ ನಡೆದ ಸೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್ ಮತ್ತು ಮ್ಯಾಕಾರ್ಥರ್ ಸೌತ್ ವೆಸ್ಟ್ ಯುನೈಟೆಡ್ ತಂಡಗಳ ನಡುವಿನ ಪ್ರದರ್ಶನ ಪಂದ್ಯದಲ್ಲಿ ಬೋಲ್ಟ್ ಗೋಲು ಬಾರಿಸಿ ವೃತ್ತಿಪರ ಫುಟ್ಬಾಲ್ ರಂಗಕ್ಕೆ ಕಾಲಿರಿಸುವ ಕನಸನ್ನು ನನಸಾಗಿಸುವ ಹಾದಿಯಲ್ಲಿದ್ದಾರೆ.

 ವೃತ್ತಿಪರ ಫುಟ್ಬಾಲ್ ಆಟಗಾರನಾಗುವುದು ಬೋಲ್ಟ್‌ರ ಬಾಲ್ಯದ ಕನಸಾಗಿತ್ತು. ಕಳೆದ ಆಗಸ್ಟ್‌ನಲ್ಲಿ ಈ ಉದ್ದೇಶಕ್ಕಾಗಿ ಎ-ಲೀಗ್ ಕ್ಲಬ್ ಸೇರಿದ್ದ ಬೋಲ್ಟ್‌ಗೆ ಸೌತ್ ವೆಸ್ಟ್ ಯುನೈಟೆಡ್ ತಂಡದ ವಿರುದ್ಧದ ಪ್ರದರ್ಶನ ಪಂದ್ಯ ಭವಿಷ್ಯವನ್ನು ನಿರ್ಧರಿಸುವ ಪಂದ್ಯವೆಂದು ಹೇಳಲಾಗಿತ್ತು. ಈ ಪಂದ್ಯದ 55ನೇ ನಿಮಿಷದಲ್ಲಿ ಬೋಲ್ಟ್ ಎಡಗಾಲಿನಲ್ಲಿ ಒದ್ದು ಚೆಂಡನ್ನು ಗುರಿ ತಲುಪಿಸುವ ಮೂಲಕ ಮೊದಲ ಗೋಲು ಜಮೆ ಮಾಡಿದರು. 69ನೇ ನಿಮಿಷದಲ್ಲಿ ಇನ್ನೊಂದು ಗೋಲು ಜಮೆ ಮಾಡಿದ ಬೋಲ್ಟ್ ಸೆೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್ ತಂಡಕ್ಕೆ 4-0 ಅಂತರದಲ್ಲಿ ಗೆಲುವಿಗೆ ನೆರವಾದರು.

  ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನ ಪಡೆದಿರುವ 32ರ ಹರೆಯದ ಬೋಲ್ಟ್ ಮೊದಲ ಪಂದ್ಯದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ‘‘ ಅವಳಿ ಗೋಲು ದಾಖಲಿಸಲು ಸಾಧ್ಯವಾಗಿರುವುದಕ್ಕೆ ಸಂತಸವಾಗಿದೆ ’’ ಎಂದು ಹೇಳಿದ್ದಾರೆ.  ಬೋಲ್ಟ್ ಅವರು ಕೋಚ್ ಮೈಕ್ ಮುಲ್ವೆ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News