ಟೆಸ್ಟ್ ಸರಣಿ: ವೆಸ್ಟ್‌ಇಂಡೀಸ್ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

Update: 2018-10-14 18:31 GMT

 ಹೈದರಾಬಾದ್, ಅ.14: ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

ವೇಗದ ಬೌಲರ್ ಉಮೇಶ್ ಯಾದವ್(4-45), ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ(3-12) ಹಾಗೂ ಆರ್.ಅಶ್ವಿನ್(2-24)ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ ತಂಡ ಎರಡನೇ ಟೆಸ್ಟ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 127 ರನ್‌ಗೆ ಆಲೌಟಾಗಿದೆ. ಈ ಮೂಲಕ ಭಾರತದ ಗೆಲುವಿಗೆ 72 ರನ್ ಗುರಿ ನೀಡಿದೆ.

ಗೆಲ್ಲಲು ಸುಲಭ ಸವಾಲು ಪಡೆದ ಭಾರತಕ್ಕೆ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್(33) ಹಾಗೂ ಪೃಥ್ವಿ ಶಾ(33)ಮೊದಲ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 75 ರನ್ ಸೇರಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ತಂಡಕ್ಕೆ ಗೆಲ್ಲಲು 2 ರನ್ ಅಗತ್ಯವಿದ್ದಾಗ ಸ್ಪಿನ್ನರ್ ಬಿಶೂ ಎಸೆತವನ್ನು ಬೌಂಡರಿಗೆ ಅಟ್ಟಿದ ಶಾ ಭಾರತಕ್ಕೆ 10 ವಿಕೆಟ್‌ಗಳ ಗೆಲುವು ತಂದರು.

ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 367 ರನ್‌ಗೆ ನಿಯಂತ್ರಿಸಿದ ವೆಸ್ಟ್‌ಇಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ ಅತ್ಯಂತ ಕಳಪೆ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಬ್ರಾತ್‌ವೇಟ್(0) ಹಾಗೂ ಪೊವೆಲ್(0)ಖಾತೆ ತೆರೆಯಲು ವಿಫಲರಾದರು.

38 ರನ್ ಗಳಿಸಿದ ಅಂಬ್ರಿಸ್ ವಿಂಡೀಸ್ ಪರ ಗರಿಷ್ಠ ಸ್ಕೋರ್ ಗಳಿಸಿದರು. ಹೋಪ್(28), ಜೇಸನ್ ಹೋಲ್ಡರ್(19) ಹಾಗೂ ಹೆಟ್ಮೆಯರ್(17)ಎರಡಂಕೆಯ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News