ಅಫ್ಘಾನ್: ತಾಲಿಬಾನ್ ದಾಳಿಗೆ 22 ಭದ್ರತಾ ಸಿಬ್ಬಂದಿ ಬಲಿ

Update: 2018-10-14 16:50 GMT

    ಕಾಬೂಲ್,ಅ.14:: ಕಳೆದ 48 ತಾಸುಗಳಲ್ಲಿ ಶಂಕಿತ ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನದ ಎರಡು ಪ್ರಾಂತಗಳಲ್ಲಿನ ತಪಾಸಣಾ ಠಾಣೆಗಳ ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಸೇರಿದಂತೆ ಕನಿಷ್ಠ 22 ಮಂದಿಯನ್ನು ಹತ್ಯೆಗೈದಿದ್ದಾರೆ. ಈ ವಾರ ಅಫ್ಘಾನ್ ಸಂಸದೀಯ ಚುನಾವಣೆ ನಡೆಯಲಿರುವಂತೆಯೇ, ಉಗ್ರರ ಹಿಂಸಾಚಾರ ಉಲ್ಬಣಗೊಂಡಿದೆ.

ಶನಿವಾರ ರಾತ್ರಿ ದಕ್ಷಿಣ ತಾಲಿಬಾನ್ ಬಂಡುಕೋರರ ಜೊತೆ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ದಿಲ್ಲಿ ಪೊಲೀಸ್ ವರಿಷ್ಠ ಮಿಝಾನ್ ಸಾವನ್ನಪ್ಪಿದ್ದಾರೆಂದು ಪ್ರಾಂತೀಯ ಗವರ್ನರ್ ರಹ್ಮಾತುಲ್ಲಾ ತಿಳಿಸಿದ್ದಾರೆ.

    ಪಶ್ಚಿಮ ಅಫ್ಘಾನಿಸ್ತಾನದ ಫರಾಹ್ ಪ್ರಾಂತದಲ್ಲಿ ತಾಲಿಬಾನ್ ಬಂಡುಕೋರರು ಎರಡು ತಪಾಸಣಾ ಠಾಣೆಗಳ ಮೇಲೆ ದಾಳಿ ನಡೆಸಿ 11 ಮಂದಿ ಸೈನಿಕರನ್ನು ಹತ್ಯೆಗೈದಿದ್ದಾರೆಂದು ಫರಾಹ್ ಪ್ರಾಂತೀಯ ಮಂಡಳಿಯ ಸದಸ್ಯ ಗುಲ್ ಅಹ್ಮದ್ ಫಕೀರಿ ತಿಳಿಸಿದ್ದಾರೆ. ಈ ದಾಳಿಗಳ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ. ‘‘ ನಮ್ಮ ಹೋರಾಟಗಾರರು ಶನಿವಾರ ರಾತ್ರಿ ಎರಡು ಪ್ರಾಂತಗಳಲ್ಲಿ ದಾಳಿ ನಡೆಸಿ, ಓರ್ವ ಪೊಲೀಸ್ ವರಿಷ್ಠ ಹಾಗೂ 25 ಮಂದಿ ಅಫ್ಘಾನ್ ಸೈನಿಕರನ್ನು ಹತ್ಯೆಗೈದಿದ್ದಾರೆ’’ ಎಂದು ತಾಲಿಬಾನ್ ವಕ್ತಾರ ಝುಬಿಯುಲ್ಲಾ ಮುಜಾಹಿದೆ ತಿಳಿಸಿದ್ದಾನೆ.

 ಅಕ್ಟೋಬರ್ 20ರಂದು ನಡೆಯಲಿರುವ ಸಂಸದೀಯ ಚುನಾವಣೆಗಳನ್ನು ಬಹಿಷ್ಕರಿಸುವಂತೆ ತಾಲಿಬಾನ್ ಕಳೆದ ವಾರ ಆದೇಶಿಸಿತ್ತು. ಅಮೆರಿಕವು, ಅಫ್ಘಾನಿಸ್ತಾನದಲ್ಲಿ ತನ್ನ ಉಪಸ್ಥಿತಿ ಹಾಗೂ ಅಧಿಕಾರವನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಅದು ಅಫ್ಘಾನಿಸ್ತಾನದಲ್ಲಿ ಸಂಸದೀಯ ಚುನಾವಣೆಗಳನ್ನು ನಡೆಸಲು ಬಯಸಿದೆಯೆಂದು ತಾಲಿಬಾನ್ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News