ಇರಾನ್ ಪ್ರಭುತ್ವ ಬದಲಾವಣೆಗೆ ಅಮೆರಿಕ ಹುನ್ನಾರ: ರೂಹಾನಿ

Update: 2018-10-14 17:27 GMT

ಟೆಹ್ರಾನ್,ಅ.14: ಅಮೆರಿಕವು ಇರಾನ್‌ನ ಆಡಳಿತ ಬದಲಾಗಬೇಕೆಂದು ಬಯಸುತ್ತಿದೆಯೆಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ರವಿವಾರ ತಿಳಿಸಿದ್ದಾರೆ. ಇರಾನ್ ದೇಶವು ಕಳೆದ ನಾಲ್ಕು ದಶಕಗಳಲ್ಲೇ ಅತ್ಯಧಿಕ ಹಗೆತನವನ್ನು ಅಮೆರಿಕದ ಹಾಲಿ ಆಡಳಿತದಿಂದ ಎದುರಿಸುತ್ತಿದೆಯೆಂದು ಅವರು ಹೇಳಿದ್ದಾರೆ.

   ಕಳೆದ ಮೇನಲ್ಲಿ ಇರಾನ್‌ನ ಅಣುಶಕ್ತಿ ಕಾರ್ಯಕ್ರಮದ ಕುರಿತಾದ ಬಹುಪಕ್ಷೀಯ ಒಪ್ಪಂದದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದ ಬಳಿಕ, ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಲ್ಬಣಿಸಿದೆ.

‘‘ಕಳೆದ 40 ವರ್ಷಗಳಲ್ಲಿ ಇರಾನ್, ಇರಾನಿ ಜನತೆ ಹಾಗೂ ಇಸ್ಲಾಮಿಕ್ ಗಣರಾಜ್ಯದೆಡೆಗೆ ಅಮೆರಿಕದ ಹಾಲಿ ಸರಕಾರದ ತಂಡವು ತಾಳಿದಷ್ಟು ದ್ವೇಷಭಾವನೆಯನ್ನು ಮತ್ತ್ಯಾರೂ ಹೊಂದಿರಲಿಲ್ಲ’ ಎಂದು ರೂಹಾನಿ ಸರಕಾರಿ ಸ್ವಾಮ್ಯದ ಟಿವಿಯಲ್ಲಿ ರವಿವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ಅಮೆರಿಕನ್ ಆಡಳಿತವು ಇರಾನ್ ವಿರುದ್ಧ ಮಾನಸಿಕ, ಆರ್ಥಿಕ ಸಮರವನ್ನು ಸಾರಿದೆ ಹಾಗೂ ಇಸ್ಲಾಮಿಕ್ ಗಣರಾಜ್ಯದ ಸಿಂಧುತ್ವವನ್ನು ಪ್ರಶ್ನಿಸುತ್ತಿದೆಯೆಂದು ರೂಹಾನಿ ಆಪಾದಿಸಿದರು.

       ಇರಾನ್‌ನ ಆಡಳಿತ ವ್ಯವಸ್ಥೆಯ ಸಿಂಧುತ್ವವನ್ನು ಕ್ಷುಲ್ಲಕಗೊಳಿಸುವುದು. ಆ ಮೂಲಕ ಇರಾನ್‌ನ ಹಾಲಿ ಸರಕಾರವನ್ನು ಬದಲಾಯಿಸುವುದೇ ಅಮೆರಿಕದ ಗುರಿಯಾಗಿದೆಯೆಂದರು. ನವೆಂಬರ್ ತಿಂಗಳಿನಿಂದ ಇರಾನ್‌ನಿಂದ ಬೇರೆ ರಾಷ್ಟ್ರಗಳ ತೈಲ ಆಮದು ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸುವುದಾಗಿ ಅಮೆರಿಕ ಘೋಷಿಸಿದೆ. 2012-15ರ ಅವಧಿಯಲ್ಲಿ ವಿಧಿಸಲಾಗಿದ್ದ ಆರ್ಥಿಕ ನಿರ್ಬಂಧಗಳಿಗಿಂತಲೂ ಭೀಕರವಾದ ಅರ್ಥಿಕ ಬಿಕ್ಕಟ್ಟನ್ನು ಇರಾನ್ ಎದುರಿಸುವ ಸಾಧ್ಯತೆಯಿದೆಯೆಂದು ಕೆಲವು ಇರಾನ್ ಅರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News