ಮೊದಲ ಏಕದಿನ : ಭಾರತಕ್ಕೆ ಭರ್ಜರಿ ಜಯ

Update: 2018-10-21 15:46 GMT

ಗುವಾಹತಿ, ಅ.21: ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಶತಕದ ನೆರವಿನಲ್ಲಿ ಟೀಮ್ ಇಂಡಿಯಾ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿದೆ.

  ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗೆಲುವಿಗೆ 323 ರನ್‌ಗಳ ಸವಾಲನ್ನು ಪಡೆದ ಭಾರತ ಇನ್ನೂ 47 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 326ರನ್ ಸೇರಿಸಿ ಗೆಲುವಿನ ದಡ ಸೇರಿತು.

  ಕೊಹ್ಲಿ ಮತ್ತು ರೋಹಿತ್ ಶರ್ಮಾ 2ನೇ ವಿಕೆಟ್‌ಗೆ 246 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊಹ್ಲಿ 140 ರನ್(107ಎ, 21ಬೌ, 2ಸಿ) ಗಳಿಸಿ ಔಟಾದರು. ರೋಹಿತ್ ಶರ್ಮಾ ಔಟಾಗದೆ 152 ರನ್ (117 ಎ, 15ಎ,8ಸಿ) ಮತ್ತು ಅಂಬಟಿ ರಾಯುಡು ಔಟಾಗದೆ 22 ರನ್(26ಎ, 1ಬೌ,1ಸಿ) ಗಳಿಸಿದರು.

 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 322 ರನ್ ಗಳಿಸಿತ್ತು.

ಗೆಲುವಿಗೆ 323 ರನ್‌ಗಳ ಸವಾಲನ್ನು ಪಡೆದ ಭಾರತ 2 ಓವರ್‌ಗಳಲ್ಲಿ 10 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ದಾಂಡಿಗ ಶಿಖರ್ ಧವನ್ (4) ನಿರ್ಗಮನದ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು.

 ಕೊಹ್ಲಿ 212ನೇ ಏಕದಿನ ಪಂದ್ಯದಲ್ಲಿ 56 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಲ್ಲಿ 36ನೇ ಶತಕ ದಾಖಲಿಸಿದರು. ರೋಹಿತ್ ಶರ್ಮಾ 189ನೇ ಏಕದಿನ ಪಂದ್ಯದಲ್ಲಿ 20ನೇ ಶತಕ ದಾಖಲಿಸಿದರು. ರೋಹಿತ್ ಶರ್ಮಾ 84 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ ಶತಕ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News