ಐಸಿಸಿ ವಿಶ್ವಕಪ್: ಟೀಮ್ ಇಂಡಿಯಾದ ಬೇಡಿಕೆ ಪಟ್ಟಿಯಲ್ಲಿ ಬಾಳೆಹಣ್ಣು!

Update: 2018-10-30 13:42 GMT

 ಮುಂಬೈ, ಅ.30: ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ವಿಶ್ವಕಪ್‌ನಲ್ಲಿ ತಮಗೆ ರೈಲಿನ ಬೋಗಿಯೊಂದನ್ನು ಮೀಸಲಿಡಬೇಕು. ಪತ್ನಿಯಂದಿರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಅನುಮತಿ ನೀಡಬೇಕು ಹಾಗೂ ಡ್ರೆಸ್ಸಿಂಗ್ ಕೊಠಡಿಯಲ್ಲಿ ತಿನ್ನಲು ಸಾಕಷ್ಟು ಬಾಳೆಹಣ್ಣುಗಳನ್ನು ಒದಗಿಸಬೇಕು ಎಂಬ ಬೇಡಿಕೆಗಳ ಪಟ್ಟಿಯನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸದಸ್ಯರು ಹೈದರಾಬಾದ್‌ನಲ್ಲಿ ನಡೆದ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಯೊಂದಿಗೆ ಪರಾಮರ್ಶೆ ಸಭೆಯ ಮುಂದೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.

ಸೆ.11ರಂದು ಕೊನೆಗೊಂಡ ಇಂಗ್ಲೆಂಡ್ ಪ್ರವಾಸದ ವೇಳೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತಮ್ಮ ಆಯ್ಕೆಯ ಹಣ್ಣುಗಳನ್ನು ಪೂರೈಸಲು ವಿಫಲವಾಗಿದೆ ಎಂದು ಭಾರತದ ಆಟಗಾರರು ದೂರಿದ್ದಾರೆ.

 ಇದಕ್ಕೆ ಉತ್ತರಿಸಿದ ಸಮಿತಿಯು, ಆಟಗಾರರು ಇಂಗ್ಲೆಂಡ್‌ನಲ್ಲಿ ಬಿಸಿಸಿಐ ಖರ್ಚಿನಲ್ಲಿ ಬಾಳೆಹಣ್ಣನ್ನು ಖರೀದಿಸುವಂತೆ ಟೀಮ್ ಮ್ಯಾನೇಜರ್‌ಗೆ ಹೇಳಬೇಕಾಗಿತ್ತು ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಸರಿಯಾದ ಜಿಮ್ ಇರುವ ಹೊಟೇಲ್‌ಗಳನ್ನು ಬುಕ್ ಮಾಡುವುದು. ಕ್ರಿಕೆಟ್ ಪ್ರವಾಸದ ವೇಳೆ ಕ್ರಿಕೆಟಿಗರು ಹಾಗೂ ಅವರ ಪತ್ನಿಯಂದಿರ ನಡುವೆ ಸಮಯದ ಶಿಷ್ಟಾಚಾರವೇನು ಎಂಬ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

 ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನಲ್ಲಿ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಬೇಕೆಂಬ ಬೇಡಿಕೆಯು ಸಮಿತಿಗೆ ಅಚ್ಚರಿ ತಂದಿದೆ. ಇದು ಭದ್ರತಾ ದೃಷ್ಟಿಯಿಂದ ಹುಬ್ಬೇರಿಸುವ ಬೇಡಿಕೆಯಾಗಿದೆ.

ರೈಲಿನಲ್ಲಿ ಪ್ರಯಾಣಿಸುವುದರಿಂದ ಸಮಯ ಉಳಿತಾಯವಾಗಲಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಕೂಡ ರೈಲಿನಲ್ಲಿ ಪ್ರಯಾಣಿಸುತ್ತದೆ ಎಂದು ಕೊಹ್ಲಿ ಸಭೆಗೆ ಮಾಹಿತಿ ನೀಡಿದ್ದರು. ಆದರೆ, ಭಾರತದ ಆಟಗಾರರನ್ನು ಕ್ರಿಕೆಟ್ ಅಭಿಮಾನಿಗಳು ಮುತ್ತಿಕೊಳ್ಳಬಹುದು. ಏನೇ ಅಹಿತಕರ ಘಟನೆ ನಡೆದರೆ, ಬಿಸಿಸಿಐ ಅಥವಾ ಸಿಒಎ ಜವಾಬ್ದಾರಿಯಲ್ಲ ಎಂಬ ಷರತ್ತಿನ ಮೇಲೆ ಭಾರತ ತಂಡ ಇಂಗ್ಲೆಂಡ್‌ನಲ್ಲಿ ರೈಲಿನಲ್ಲಿ ಪ್ರಯಾಣಿಸಬಹುದು ಎಂದು ಸಮಿತಿ ಹೇಳಿದ್ದಾಗಿ ತಿಳಿದುಬಂದಿದೆ.

ಮುಂದಿನ ತಿಂಗಳು ಆರಂಭವಾಗಲಿರುವ ಆಸ್ಟ್ರೇಲಿಯ ಪ್ರವಾಸಕ್ಕೆ ಆಟಗಾರರೊಂದಿಗೆ ಅವರ ಪತ್ನಿಯಂದಿರು ತೆರಳುವ ಬಗ್ಗೆ ಸಿಒಎ ಒಪ್ಪಿಗೆ ನೀಡಿದೆ. ಆದರೆ, ಅವರು ವಿದೇಶಕ್ಕೆ ತೆರಳಿದ ಬಳಿಕ ಅಧಿಕೃತ ಟೀಮ್ ಬಸ್‌ನಲ್ಲಿ ತೆರಳುವಂತಿಲ್ಲ. ಆಟಗಾರರ ಪತ್ನಿಯಂದಿರಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗುವುದು ಎಂದು ಸಿಒಎ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News