ಬಟ್ಲರ್ ಬಡಿದ ಚೆಂಡು ನಿಸ್ಸಾಂಕ ತಲೆಗೆ ಬಡಿಯಿತು !

Update: 2018-10-31 15:34 GMT

ಕೊಲಂಬೊ, ಅ.31: ಇಲ್ಲಿ ನಡೆದ ಎರಡು ದಿನಗಳ ಪ್ರದರ್ಶನ ಪಂದ್ಯದಲ್ಲಿ ಮಂಗಳವಾರ ಪ್ರವಾಸಿ ಇಂಗ್ಲೆಂಡ್ ತಂಡದ ಉಪ ನಾಯಕ ಜೋಸ್ ಬಟ್ಲರ್ ಬಾರಿಸಿದ ಚೆಂಡು ಶ್ರೀಲಂಕಾದ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ಆಟಗಾರ ಪಾಥುಮ್ ನಿಸ್ಸಾಂಕ ತಲೆಗೆ ಬಡಿದಿದೆ.

ಜೋಸ್ ಬಟ್ಲರ್ ಅವರು ಲಂಕಾದ ಸ್ಪಿನ್ನರ್ ನಿಷನ್ ಪೀರಿಸ್ ಎಸೆತದಲ್ಲಿ ಚೆಂಡನ್ನು ಬಲವಾಗಿ ಬಾರಿಸಿದರು. ಶಾರ್ಟ್ ಫೈನ್ ಲೆಗ್‌ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಪಾಥುಮ್ ನಿಸ್ಸಾಂಕ ಅವರ ತಲೆಗೆ ಚೆಂಡು ಬಡಿಯಿತು. ಹೆಲ್ಮೆಟ್ ಧರಿಸಿದ ಕಾರಣದಿಂದಾಗಿ ನಿಶಾಂಕ ಅಪಾಯದಿಂದ ಪಾರಾಗಿದ್ದಾರೆ.

ಚೆಂಡು ತಲೆಗೆ ಬಡಿದಾಗ ನಿಸ್ಸಾಂಕ ನೋವುನಿಂದ ತಾಳಲಾರದೆ ಕುಸಿದು ಬಿದ್ದರು. ಉಭಯ ತಂಡಗಳ ಆಟಗಾರರು ಅವರ ನೆರವಿಗೆ ಧಾವಿಸಿದರು. ವೈದ್ಯರ ತಂಡ ಧಾವಿಸಿ ಬಂದು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ನಿಸ್ಸಾಂಕ ರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು. ನಿಶಾಂಕ ಅವರಿಗೆ ಕುಸಿದು ಬಿದ್ದಾಗ ಅವರಿಗೆ ಪ್ರಜ್ಞೆ ತಪ್ಪಿಲ್ಲ. ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ನಿಶಾಂಕ ಅಪಾಯದಿಂದ ಪಾರಾಗಿದ್ದಾರೆ. 20ರ ಹರೆಯದ ನಿಸ್ಸಾಂಕ 14 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 4 ಶತಕ ದಾಖಲಿಸಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಈ ಪಂದ್ಯದಲ್ಲಿ ಶ್ರೀಲಂಕಾದ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟದಲ್ಲಿ 392 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 4 ವಿಕೆಟ್ ನಷ್ಟದಲ್ಲಿ 220 ರನ್ ಗಳಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News