ಐದನೇ ಏಕದಿನ: ಭಾರತದ ಗೆಲುವಿಗೆ 105 ರನ್ ಗುರಿ
ತಿರುವನಂತಪುರ, ನ.1: ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ(4-34)ನೇತೃತ್ವದ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ ತಂಡ ಕೇವಲ 104 ರನ್ ಗೆ ಆಲೌಟಾಯಿತು. ಕೊಹ್ಲಿ ಪಡೆ ಗೆಲುವಿಗೆ ಸುಲಭ ಗುರಿ ನೀಡಿತು.
ಇಲ್ಲಿ ಗುರುವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಜಯಿಸಿದ ವೆಸ್ಟ್‌ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಇನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ಆರಂಭಿಕ ಆಟಗಾರ ಪೊವೆಲ್(0) ವಿಕೆಟನ್ನು ಕಳೆದುಕೊಂಡ ವಿಂಡೀಸ್ ಆನಂತರ ಚೇತರಿಸಿಕೊಳ್ಳಲು ವಿಫಲವಾಗಿ 31.5 ಓವರ್‌ಗಳಲ್ಲಿ 104 ರನ್‌ಗೆ ಆಲೌಟಾಯಿತು. ನಾಯಕ ಜೇಸನ್ ಹೋಲ್ಡರ್(25) ಹಾಗೂ ಮರ್ಲಾನ್ ಸ್ಯಾಮುಯೆಲ್ಸ್(24), ಆರ್.ಪೊವೆಲ್(16) ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ಬೇಗನೆ ಔಟಾಗಿ ನಿರಾಸೆಗೊಳಿಸಿದರು.
ಭಾರತದ ಪರ ರವೀಂದ್ರ ಜಡೇಜ(4-34) ಯಶಸ್ವಿ ಬೌಲರ್ ಎನಿಸಿಕೊಂಡರು. ಜಸ್‌ಪ್ರಿತ್ ಬುಮ್ರಾ(2-11) ಹಾಗೂ ಖಲೀಲ್ ಅಹ್ಮದ್(2-29)ತಲಾ ಎರಡು ವಿಕೆಟ್ ಪಡೆದರು.
ಗೆಲ್ಲಲು ಸುಲಭ ಸವಾಲು ಪಡೆದಿರುವ ಭಾರತ 9 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ. ಈಗಾಗಲೇ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ನಾಯಕ ವಿರಾಟ್ ಕೊಹ್ಲಿ(15) ಹಾಗೂ ಉಪ ನಾಯಕ ರೋಹಿತ್ ಶರ್ಮಾ(19) ಕ್ರೀಸ್ ಕಾಯ್ದುಕೊಂಡಿದ್ದಾರೆ.