ರಣಜಿ ಟ್ರೋಫಿ: ಪುತ್ರನನ್ನು ಔಟ್ ಮಾಡಲು ರಣನೀತಿ ರೂಪಿಸಬೇಕಾದ ಸಂಕಷ್ಟದಲ್ಲಿ ತಂದೆ!
ಹೊಸದಿಲ್ಲಿ, ನ.1: ಕ್ರೀಡೆ ಅದರಲ್ಲೂ ಕ್ರಿಕೆಟ್‌ನಲ್ಲಿ ತಂದೆಯಾದವನಿಗೆ ತನ್ನ ಮಗನನ್ನು ಔಟ್ ಮಾಡಲು ರಣನೀತಿ ರೂಪಿಸುವುದು ತುಂಬಾ ಕಷ್ಟದ ಕೆಲಸ. ರೈಲ್ವೇಸ್ ತಂಡದ ಸಮೀಕ್ಷಕ/ಕೋಚ್ ದಿನೇಶ್ ಲಾಡ್ ಅಂತಹ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಯಿತು. ಮುಂಬೈ ರಣಜಿ ತಂಡವನ್ನು ಪ್ರತಿನಿಧಿಸುತ್ತಿರುವ ಫಾರ್ಮ್‌ನಲ್ಲಿರುವ ತನ್ನ ಪುತ್ರ ಸಿದ್ದೇಶ್ ಲಾಡ್‌ರನ್ನು ಔಟ್ ಮಾಡಲು ಸ್ವತಃ ದಿನೇಶ್ ರಣನೀತಿ ರೂಪಿಸಬೇಕಾಗಿದೆ.
ಮುಂಬೈ ಹಾಗೂ ರೈಲ್ವೇಸ್ ತಂಡಗಳ ನಡುವೆ ಗುರುವಾರ ಆರಂಭವಾದ ರಣಜಿ ಟ್ರೋಫಿಯ ಮೊದಲ ದಿನ ದಿನೇಶ್ ಲಾಡ್ ತನ್ನ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರೋಹಿತ್ ಶರ್ಮಾರ ಬಾಲ್ಯದ ಕೋಚ್ ಆಗಿದ್ದ ಲಾಡ್ ಮಾಜಿ ವೆಸ್ಟರ್ನ್ ರೈಲ್ವೇ ಕ್ರಿಕೆಟಿಗ. ರೈಲ್ವೇಸ್ ಕ್ರಿಕೆಟ್ ತಂಡಕ್ಕೆ ನಿನ್ನೆಯಷ್ಟೇ ಸಮೀಕ್ಷಕರಾಗಿ ನೇಮಕಗೊಂಡಿದ್ದರು.
ಪುತ್ರ ಸಿದ್ದೇಶ್‌ರನ್ನು ಔಟ್ ಮಾಡಲು ರೈಲ್ವೇಸ್ ಬೌಲರ್‌ಗಳಿಗೆ ಸಲಹೆ ನೀಡಿದ್ದೀರಾ? ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಲಾಡ್, ‘‘ತಂದೆಯಾದವನಿಗೆ ಇದು ತುಂಬಾ ಕಷ್ಟದ ಪರಿಸ್ಥಿತಿ. ನಾನು ನನ್ನ ತಂಡದ ಬಗ್ಗೆ ಯೋಚಿಸುವೆ. ಅದೇ ವೇಳೆ ನನ್ನ ಮಗನ ಬಗ್ಗೆಯೂ ಯೋಚಿಸುವೆ. ನನ್ನ ಮಗ ವಿಫಲನಾಗಬೇಕೆಂದು ನಾನು ಬಯಸುವುದಿಲ್ಲ. ಫಾರ್ಮ್‌ನಲ್ಲಿರುವ ಆಟಗಾರನನ್ನು ಔಟ್ ಮಾಡಲು ತಾಳ್ಮೆ ಅಗತ್ಯವಾಗಿ ಬೇಕು. ನಾನು ಹಾಗೂ ನನ್ನ ಮಗ ಎದುರಾಳಿ ತಂಡದಲ್ಲಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹೀಗಾಗಿತ್ತು ಎಂದು ಹೇಳಿದರು.
ದಿಲ್ಲಿಯ ವಾಯು ಮಾಲಿನ್ಯದಿಂದ ಪಾರಾಗಲು ಮುಖಕ್ಕೆ ಮಾಸ್ಕ್ ಧರಿಸಿ ಆಡಿದ ಮುಂಬೈನ ಮಧ್ಯಮ ಕ್ರಮಾಂಕದ ದಾಂಡಿಗ ಸಿದ್ದೇಶ್ ಮೊದಲ ದಿನ ಔಟಾಗದೆ 80 ರನ್ ಗಳಿಸಿದ್ದಾರೆ. ಮುಂಬೈ ದಿನದಾಟದಂತ್ಯಕ್ಕೆ 5 ವಿಕೆಟ್‌ಗಳ ನಷ್ಟಕ್ಕೆ 278 ರನ್ ಗಳಿಸಿದೆ. ಸೂರ್ಯಕುಮಾರ್ ಯಾದವ್ 83 ರನ್ ಕೊಡುಗೆ ನೀಡಿದ್ದಾರೆ.