ಇರಾನ್‌ನಿಂದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ಅನುಮತಿ?

Update: 2018-11-02 15:45 GMT

ವಾಶಿಂಗ್ಟನ್, ನ. 2: ಇರಾನ್ ಮೇಲೆ ನವೆಂಬರ್ 5ರಂದು ದಿಗ್ಬಂಧನಗಳನ್ನು ಮರುಹೇರಿದ ಬಳಿಕವೂ, ಜಪಾನ್, ಭಾರತ ಮತ್ತು ದಕ್ಷಿಣ ಕೊರಿಯ ಸೇರಿದಂತೆ ಎಂಟು ದೇಶಗಳಿಗೆ ಆ ದೇಶದಿಂದ ತೈಲ ಖರೀದಿಸುವುದನ್ನು ಮುಂದುವರಿಸಲು ಅಮೆರಿಕ ಒಪ್ಪಿಗೆ ನೀಡಿದೆ.

ಇರಾನ್‌ನ ಆರ್ಥಿಕತೆಗೆ ಬರುವ ಆದಾಯವನ್ನು ತಡೆಯುವ ಅಮೆರಿಕದ ಟ್ರಂಪ್ ಸರಕಾರದ ಉದ್ದೇಶ ಚಾಲ್ತಿಯಲ್ಲಿರುತ್ತದೆ ಹಾಗೂ, ಅದೇ ವೇಳೆ, ಕೆಲವು ದೇಶಗಳಿಗೆ ವಿನಾಯಿತಿಗಳನ್ನು ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಆ ದೇಶಗಳು ನಿರಂತರವಾಗಿ ತೈಲ ಆಮದನ್ನು ಕಡಿತಗೊಳಿಸಬೇಕು. ತೈಲ ದರ ಏರದಂತೆ ನೋಡಿಕೊಳ್ಳಲು ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸರಕಾರದ ಹಿರಿಯ ಅಧಿಕಾರಿಯೊಬ್ಬರು ಅನಧಿಕೃತವಾಗಿ ತಿಳಿಸಿದರು.

ಇರಾನ್ ತೈಲದ ಪ್ರಮುಖ ಆಮದು ದೇಶವಾಗಿರುವ ಚೀನಾ, ಆಮದು ಶರತ್ತುಗಳ ಬಗ್ಗೆ ಟ್ರಂಪ್ ಆಡಳಿತದೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಆದರೆ, ವಿನಾಯಿತಿ ಪಡೆಯುವ ಎಂಟು ದೇಶಗಳಲ್ಲಿ ಅದೂ ಒಂದಾಗಿದೆ.

ವಿನಾಯಿತಿ ಪಡೆಯುವ ಇತರ ನಾಲ್ಕು ದೇಶಗಳು ಯಾವುದೆಂದು ಗೊತ್ತಾಗಿಲ್ಲ.

ಆದರೆ, ಈ ವಿನಾಯಿತಿ ತಾತ್ಕಾಲಿಕವಾಗಿರುತ್ತದೆ. ವಿನಾಯಿತಿ ಪಡೆಯುವ ದೇಶಗಳು ಮುಂಬರುವ ತಿಂಗಳುಗಳಲ್ಲಿ ಆಮದು ಪ್ರಮಾಣವನ್ನು ಕಡಿತ ಮಾಡುತ್ತಾ ಬರಬೇಕೆಂದು ಅಮೆರಿಕ ಬಯಸುತ್ತದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಆದರೆ, ವಿನಾಯಿತಿ ಅಡಿಯಲ್ಲಿ ಎಷ್ಟು ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳಲು ದೇಶಗಳಿಗೆ ಅವಕಾಶ ನೀಡಲಾಗುವುದು ಎನ್ನುವುದನ್ನು ಅವರು ಬಹಿರಂಗಪಡಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News