ಮಧ್ಯಪ್ರದೇಶಕ್ಕೆ ಕಡಿವಾಣ ಹಾಕಿದ ತಮಿಳುನಾಡು
ದಿಂಡಿಗಲ್, ನ.2: ರಜತ್ ಪಾಟಿದಾರ್ ಏಕಾಂಗಿ ಹೋರಾಟದ ಹೊರತಾಗಿಯೂ ಮಧ್ಯಪ್ರದೇಶ ತಂಡ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿಯ ಮೊದಲ ಇನಿಂಗ್ಸ್‌ನಲ್ಲಿ 393 ರನ್ ಗಳಿಸಿ ಆಲೌಟಾಯಿತು.
ಎಲೈಟ್ ಗ್ರೂಪ್ ಬಿ ಪಂದ್ಯದಲ್ಲಿ ಎರಡನೇ ದಿನವಾದ ಶುಕ್ರವಾರ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿದ್ದ ಮಧ್ಯಪ್ರದೇಶ ತಂಡವನ್ನು ಟೆಸ್ಟ್ ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ವೇಗದ ಬೌಲರ್ ಎಂ.ಮುಹಮ್ಮದ್ ತಲಾ 4 ವಿಕೆಟ್‌ಗಳನ್ನು ಕಬಳಿಸಿ ನಿಯಂತ್ರಿಸಿದರು. 3 ವಿಕೆಟ್‌ಗಳ ನಷ್ಟಕ್ಕೆ 214 ರನ್‌ನಿಂದ ಎರಡನೇ ದಿನದಾಟವನ್ನು ಆರಂಭಿಸಿದ ಮಧ್ಯಪ್ರದೇಶದ ಪರ ಪಾಟಿದಾರ್ ಅವರು ಶುಭಂ ಶರ್ಮಾ(43) ಅವರೊಂದಿಗೆ ಮತ್ತೊಂದು ಉಪಯುಕ್ತ ಜೊತೆಯಾಟ ನಡೆಸಿ ತಂಡವನ್ನು ಸುಸ್ಥಿತಿಯತ್ತ ಮುನ್ನಡೆಸಿದರು. ಶರ್ಮಾ ಹಾಗೂ ಪಾಟಿದಾರ್ ಔಟಾದ ಬೆನ್ನಿಗೇ ಕುಸಿತದ ಹಾದಿ ಹಿಡಿದ ಮಧ್ಯಪ್ರದೇಶ 393 ರನ್‌ಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಶುಭಂ ಶರ್ಮಾ ಅವರು ರಾಹುಲ್ ಶಾ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಜಗದೀಶನ್‌ಗೆ ಕ್ಯಾಚ್ ನೀಡಿದರು. ಪಾಟಿದಾರ್ ಹಾಗೂ ಯಶ್ ದುಬೆ(6) 42 ರನ್ ಸೇರಿಸಿದರು. ಇಂದು ಕೂಡ ಪಾಟಿದಾರ್ ತಮಿಳುನಾಡು ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು.
ಪಾಟಿದಾರ್ 406 ಎಸೆತಗಳ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. 196 ರನ್ ಗಳಿಸಿದ ಪಾಟಿದಾರ್ ಅವರು ಮುಹಮ್ಮದ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಜಗದೀಶನ್‌ಗೆ ಕ್ಯಾಚ್ ನೀಡಿ ಕೇವಲ 4 ರನ್‌ನಿಂದ ದ್ವಿಶತಕ ವಂಚಿತರಾದರು.
ಅಶ್ವಿನ್ ಕೊನೆಯ ಮೂರು ವಿಕೆಟ್‌ಗಳನ್ನು ಉರುಳಿಸಿದರು. 38.4 ಓವರ್‌ಗಳಲ್ಲಿ 45 ರನ್ ನೀಡಿ 4 ವಿಕೆಟ್ ಪಡೆದರು. ಮುಹಮ್ಮದ್ 98 ರನ್‌ಗೆ ನಾಲ್ಕು ವಿಕೆಟ್ ಉರುಳಿಸಿದರು.
ಅಶ್ವಿನ್, ಮುಹಮ್ಮದ್ ಗೆ ತಲಾ 4 ವಿಕೆಟ್
ಸಂಕ್ಷಿಪ್ತ ಸ್ಕೋರ್
ಮಧ್ಯಪ್ರದೇಶ: 157.4 ಓವರ್‌ಗಳಲ್ಲಿ 393/10
(ರಜತ್ ಪಾಟಿದಾರ್ 196, ಆರ್ಯಮನ್ ವಿಕ್ರಂ 51, ನಮನ್ ಓಜಾ 45, ಆರ್.ಅಶ್ವಿನ್ 85ಕ್ಕೆ4, ಎಂ.ಮುಹಮ್ಮದ್ 98ಕ್ಕೆ4)
ತಿರುವನಂತಪುರ: ಹೈದರಾಬಾದ್ ವಿರುದ್ಧ ಕೇರಳ 495/6 ಡಿಕ್ಲೇರ್
(ಸಚಿನ್ ಬೇಬಿ 147, ವಿಎ ಜಗದೀಶ್ ಔಟಾಗದೆ 113, ಜಲಜ್ ಸಕ್ಸೇನ 58, ಸಂಜು ಸ್ಯಾಮ್ಸನ್ 53, ಸಾಕೇತ್ 110ಕ್ಕೆ3)
ಅಮ್ಟರ್: ಬಂಗಾಳ 380 ರನ್‌ಗೆ ಆಲೌಟ್
(ಮನೋಜ್ ತಿವಾರಿ 55, ಅನುಸ್ತುಪ್ ಮುಜುಂದಾರ್ 52, ಅಭಿಷೇಕ್ 48, ಜಸ್ವಾಲ್ 81, ಆರ್.ಧವನ್ 56ಕ್ಕೆ2)
ಹಿಮಾಚಲ ಪ್ರದೇಶ: 43 ಓವರ್‌ಗಳಲ್ಲಿ 124/3
(ಎಕೆ ಬೈನ್ಸ್ ಔಟಾಗದೆ 79, ಅಶೋಕ್ ದಿಂಡಾ 25ಕ್ಕೆ2)
ವಿಶಾಖಪಟ್ಟಣ: ಪಂಜಾಬ್ 414 ರನ್‌ಗೆ ಆಲೌಟ್
(ಸನ್ವಿರ್ ಸಿಂಗ್ 110, ಮಯಾಂಕ್ ಮರ್ಕಂಡೆ ಔಟಾಗದೆ 68, ಮನ್‌ದೀಪ್ ಸಿಂಗ್ 68, ಶುಭಮನ್ ಗಿಲ್ 56, ಅಯ್ಯಪ್ಪ 78ಕ್ಕೆ3, ಕರಣ್ ಶರ್ಮಾ 115ಕ್ಕೆ3)
ಆಂಧ್ರಪ್ರದೇಶ: 26 ಓವರ್‌ಗಳಲ್ಲಿ 54/3