×
Ad

ರೋಹಿತ್ ಶರ್ಮಾ ನಾಯಕತ್ವಕ್ಕೆ ಇನ್ನೊಂದು ಸವಾಲು

Update: 2018-11-03 23:54 IST

ಕೋಲ್ಕತಾ, ನ.3: ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವೆ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿದೆ.

ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದುಕೊಂಡಿರುವ ಭಾರತಕ್ಕೆ ಇನ್ನೊಂದು ಸರಣಿ ಗೆಲ್ಲುವ ಅವಕಾಶ. ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕರಾಗಿ ತಂಡವನ್ನು ಮುನ್ನಡೆಸುವರು.

ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಈ ಕಾರಣದಿಂದಾಗಿ ರೋಹಿತ್ ಶರ್ಮಾಗೆ ಇನ್ನೊಂದು ಸವಾಲು ಎದುರಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಸರಣಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ಕಾರಣದಿಂದಾಗಿ ರಿಷಭ್ ಪಂತ್‌ಗೆ ಅವಕಾಶ ಒಲಿದು ಬಂದಿದೆ.

ಮಾಜಿ ನಾಯಕ ಧೋನಿ ವಿಶ್ರಾಂತಿ ಬಯಸಿದ್ದರೂ, ಅವರನ್ನು ಕಳಪೆ ಫಾರ್ಮ್ ಕಾರಣದಿಂದಾಗಿ ವೆಸ್ಟ್‌ಇಂಡೀಸ್ ಮತ್ತು ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಸರಣಿಯಿಂದ ದೂರ ಇಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. 2011ರಲ್ಲಿ 50 ಓವರ್‌ಗಳ ವಿಶ್ವಕಪ್ ಮತ್ತು 2007ರಲ್ಲಿ ಟ್ವೆಂಟಿ-20 ವಿಶ್ವಕಪ್ ಜಯಿಸಿದ್ದ ತಂಡದ ನಾಯಕ ರಾಗಿದ್ದ ಧೋನಿ 2018ರಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರನ್ ಬರ ಎದುರಿಸುತ್ತಿದ್ದಾರೆ. 37ರ ಹರೆಯದ ಧೋನಿ 2018ರಲ್ಲಿ 17 ಪಂದ್ಯಗಳಲ್ಲಿ 27.22 ಸರಾಸರಿಯಂತೆ ಕೇವಲ 245 ರನ್ ದಾಖಲಿಸಿದ್ದಾರೆ.

ಧೋನಿ ಗರಿಷ್ಠ ಟ್ವೆಂಟಿ-20 ಪಂದ್ಯಗಳನ್ನು ಆಡಿದವರು. ಶುಐಬ್ ಮಲಿಕ್ ಮತ್ತು ಶಾಹಿದ್ ಅಫ್ರಿದಿ ಅವರ ಬಳಿಕ ಗರಿಷ್ಠ ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ತಂಡದ ಮೂಲಗಳ ಪ್ರಕಾರ ಮುಂದಿನ ವಿಶ್ವಕಪ್ ತನಕ ಧೋನಿಯನ್ನು ತಂಡದಲ್ಲಿ ಉಳಿಸಬೇಕು. ಅಷ್ಟರ ತನಕ ಅವರಿಗೆ ಫಿಟ್‌ನೆಸ್ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶವನ್ನು ತಂಡದ ಮ್ಯಾನೇಜ್‌ಮೆಂಟ್ ಹೊಂದಿದೆ. ಧೋನಿ ಅನುಪಸ್ಥಿತಿಯಲ್ಲಿ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಆಡುವ ಅವಕಾಶ ಪಡೆಯಲಿದ್ದಾರೆ. ಟೆಸ್ಟ್‌ನಲ್ಲಿ ಮಿಂಚಿರುವ ರಿಷಭ್‌ಗೆ ಟ್ವೆಂಟಿ-20ಯಲ್ಲಿ ಅವಕಾಶ ಸಿಕ್ಕಿದೆ.

ಟೀಮ್ ಇಂಡಿಯಾ ಮತ್ತು ವೆಸ್ಟ್‌ಇಂಡಿಸ್ ತಂಡಗಳು ಜೊತೆಯಾಗಿ ಕೋಲ್ಕತಾಕ್ಕೆ ಆಗಮಿಸಿವೆ. ತಿರುವನಂತಪುರದಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಭಾರತ ಗೆಲ್ಲುವ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಅಂತಿಮ ಏಕದಿನ ಪಂದ್ಯದಲ್ಲಿ ವಿಂಡೀಸ್ 104 ರನ್‌ಗಳಿಗೆ ಆಲೌಟಾಗಿತ್ತು. ಭಾರತ ಈ ಪಂದ್ಯದಲ್ಲಿ 9 ವಿಕೆಟ್‌ಗಳ ಜಯ ಗಳಿಸಿತ್ತು. ಟೆಸ್ಟ್‌ನಲ್ಲಿ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿತ್ತು. ರೋಹಿತ್ ನಾಯಕತ್ವದ ಭಾರತ ಏಶ್ಯಕಪ್‌ನಲ್ಲಿ ಚಾಂಪಿಯನ್ ಆಗಿತ್ತು. ವಿಂಡೀಸ್ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಅವರಿಗೆ ಸಿಕ್ಕಿದೆ. ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಲು ಅವರು ಎದುರು ನೋಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಲೋಕೇಶ್ ರಾಹುಲ್ ಅವರು ಆರಂಭಿಕ ದಾಂಡಿಗನ ಸ್ಥಾನಕ್ಕೆ ಅವಕಾಶ ಪಡೆಯಲಿದ್ದಾರೆ. ದಿನೇಶ್ ಕಾರ್ತಿಕ್. ಮನೀಷ್ ಪಾಂಡೆ ಮತ್ತು ಶ್ರೇಯಸ್ ಅಯ್ಯರ್ ಅವರ ನಡುವೆ ಮಧ್ಯಮ ಸರದಿಯ 2 ಸ್ಥಾನಗಳಿಗೆ ಪೈಪೋಟಿ ಕಂಡು ಬಂದಿದೆ. ಇನ್ನೂ ಅಂತರ್‌ರಾಷ್ಟ್ರೀಯ ಪಂದ್ಯ ಆಡದಿರುವ ಕೃನಾಲ್ ಪಾಂಡ್ಯ ಮತ್ತು ಶಾಬಾಝ್ ನದೀಮ್ ಅಂತಿಮ ಹನ್ನೊಂದರಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ ತಂಡಕ್ಕೆ ವಾಪಸಾಗಿದ್ದಾರೆ. ವಾಶಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ವಿಂಡೀಸ್ ತಂಡದಲ್ಲಿ ಐವರು ಇನ್ನೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡದವರು ಇದ್ದಾರೆ. ಆಲ್‌ರೌಂಡರ್ ಫ್ಯಾಬಿಯಾನೊ ಆ್ಯಲೆನ್, ವೇಗಿ ಒಶಾನೆ ಥಾಮಸ್ ಮತ್ತು ಒಬೆಡ್ ಮೆಕ್ವಾಯ್ ಮೊದಲ ಬಾರಿ ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ಆಡಿದ್ದರು. 2016ರ ಟ್ವೆಂಟಿ-20 ಚಾಂಪಿಯನ್ ವೆಸ್ಟ್ ಇಂಡೀಸ್ ಟೆಸ್ಟ್ ಹಾಗೂ ಏಕದಿನ ಸರಣಿ ಕಳೆದುಕೊಂಡಿದ್ದರೂ, ಟ್ವೆಂಟಿ-20 ಸರಣಿಯಲ್ಲಿ ಗೆಲುವಿನ ಕಡೆಗೆ ನೋಡುತ್ತಿದೆ.

 ಭಾರತ : ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಲೋಕೇಶ್ ರಾಹುಲ್, ದಿನೇಶ್ ಕಾರ್ತಿಕ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೃನಾಲ್ ಪಾಂಡ್ಯ, ವಾಶಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಕುಲ್‌ದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಕೆ. ಖಲೀಲ್ ಅಹ್ಮದ್, ಉಮೇಶ್ ಯಾದವ್, ಶಾಬಾಝ್ ನದೀಮ್.

  ವೆಸ್ಟ್‌ಇಂಡೀಸ್: ಕಾರ್ಲೊಸ್ ಬ್ರಾಥ್‌ವೇಟ್(ನಾಯಕ), ಫ್ಯಾಬಿಯಾನೊ ಆ್ಯಲೆನ್, ಡರೆನ್ ಬ್ರಾವೊ, ಶಿಮ್ರಾನ್ ಹೆಟ್ಮೆಯರ್, ಆಶ್ಲೇ ನರ್ಸೆ, ಕೀಮೊ ಪೌಲ್, ಕೀರನ್ ಪೊಲಾರ್ಡ್, ದಿನೇಶ್ ರಾಮ್ದಿನ್, ಆ್ಯಂಡ್ರೆ ರಸ್ಸೆಲ್, ಶೆರ್ಫಾನೆ ರುದರ್‌ಫೋರ್ಡ್, ಒಶಾನೆ ಥಾಮಸ್, ಖಾರ್ರಿ ಪಿಯರ್ರೆ, ಒಬೆಡ್ ಮೆಕ್ವಾಯ್, ರೊವ್‌ಮ್ಯಾನ್ ಪೊವೆಲ್, ನಿಕೊಲಸ್ ಪೊರಾನ್.

ಪಂದ್ಯದ ಸಮಯ - ರಾತ್ರಿ 7:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News