ಪ್ಯಾರಿಸ್ ಮಾಸ್ಟರ್ಸ್: ಸೆಮಿಫೆನಲ್‌ನಲ್ಲಿ ಫೆಡರರ್‌ನನ್ನು ಹೊರದಬ್ಬಿದ ಜೊಕೊವಿಕ್
ಪ್ಯಾರಿಸ್,ನ.4: ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್‌ನ ಸೆಮಿಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರು ವಿಶ್ವದ ಮೂರನೇ ಶ್ರೆಯಾಂಕಿತ ಸ್ವಿಝರ್ಲೆಂಡ್‌ನ ರೋಜರ್ ಫೆಡರರ್‌ಗೆ 7-6(6), 5-7, 7-6(3) ಸೆಟ್‌ಗಳ ಅಂತರದಿಂದ ಸೋಲುಣಿಸಿದ್ದಾರೆ. ಆಮೂಲಕ ಟೆನಿಸ್ ಜೀವನದ ನೂರನೇ ಪ್ರಶಸ್ತಿಯನ್ನು ತನ್ನದಾಗಿಸುವ ಕಾತರದಲ್ಲಿದ್ದ ಫೆಡರರ್ ಕನಸನ್ನು ಭಗ್ನಗೊಳಿಸಿದ್ದಾರೆ. ಈ ಗೆಲುವಿನೊಂದಿಗೆ ಜೊಕೊವಿಕ್ ತನ್ನ ಗೆಲುವಿನ ನಾಗಲೋಟವನ್ನು ಮುಂದುವರಿಸಿದ್ದು ಈವರೆಗೆ ಸತತ 22 ಪಂದ್ಯಗಳಲ್ಲಿ ಜಯ ಸಂಪಾದಿಸಿದ್ದಾರೆ. ಜೊಕೊವಿಕ್ ಮತ್ತು ಫೆಡರರ್ 47ನೇ ಬಾರಿ ಮುಖಾಮುಖಿಯಾದ ಪಂದ್ಯದಲ್ಲಿ ಸರ್ಬಿಯನ್ ಆಟಗಾರ ಯಾವುದೇ ಹಂತದಲ್ಲೂ ಟೆನಿಸ್‌ನ ತನ್ನ ಬದ್ಧ ವೈರಿ ಫೆಡರರ್ ಮುಂದೆ ಸೋಲೊಪ್ಪಿಕೊಳ್ಳಲು ನಿರಾಕರಿಸಿದರು. ಇದೇ ವೇಳೆ ಮೂರು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಟೈಬ್ರೇಕರ್‌ನಲ್ಲಿ ಫೆಡರರ್‌ನನ್ನು ಮಣಿಸುವ ಮೂಲಕ ಸ್ವಿಸ್ ಆಟಗಾರನ ಮುಂದೆ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದರು.
ಕಳೆದ ಹನ್ನೆರಡು ವರ್ಷಗಳಿಂದ ಫೆಡರರ್ ಮತ್ತು ಜೊಕೊವಿಕ್ ಮುಖಾಮುಖಿಯಾಗುತ್ತಿದ್ದು ಈ ಹಿಂದೆ ಫೆಡರರ್ ಜೊಕೊವಿಕ್‌ನನ್ನು ಸತತ ನಾಲ್ಕು ಪಂದ್ಯಗಳಲ್ಲಿ ಸೋಲಿಸಿದ್ದರು. ಶನಿವಾರ ನಡೆದ ಪಂದ್ಯದಲ್ಲಿ ಜೊಕೊವಿಕ್ ಇದಕ್ಕೆ ಪ್ರತಿಕಾರ ತೀರಿಸಿದ್ದಾರೆ.