ಟಿ-20ಯಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಬಾಬರ್ ಆಝಮ್

Update: 2018-11-05 15:05 GMT

 ದುಬೈ, ನ.5: ಪಾಕಿಸ್ತಾನದ ಆಟಗಾರ ಬಾಬರ್ ಆಝಮ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 1,000 ರನ್ ಪೂರೈಸುವ ಮೂಲಕ ಭಾರತದ ನಾಯಕ ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಮುರಿದರು.

ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ನಡೆದ ನ್ಯೂಝಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಝಮ್ ಈ ಸಾಧನೆ ಮಾಡಿದರು.

 ಕಿವೀಸ್ ವಿರುದ್ಧ 48 ರನ್ ತಲುಪಿದ ತಕ್ಷಣ ಆಝಮ್ ವೃತ್ತಿಜೀವನದ ತನ್ನ 26ನೇ ಇನಿಂಗ್ಸ್‌ನಲ್ಲಿ 1,000 ರನ್ ಪೂರೈಸಿದರು. 58 ಎಸೆತಗಳನ್ನು ಎದುರಿಸಿದ ಆಝಮ್ 7 ಬೌಂಡರಿ, 2 ಸಿಕ್ಸರ್‌ಗಳ ಸಹಿತ 79 ರನ್ ಗಳಿಸಿದರು. ಇದು ಟಿ-20 ಕ್ರಿಕೆಟ್‌ನಲ್ಲಿ ಆಝಮ್ ಗಳಿಸಿದ 8 ಅರ್ಧಶತಕವಾಗಿದೆ. ಆಝಮ್ ಅವರು ಕೊಹ್ಲಿಗಿಂತ ಒಂದು ಇನಿಂಗ್ಸ್‌ಗಿಂತ ಮೊದಲೇ 1,000 ರನ್ ಪೂರೈಸಿದರು.

 ಆಝಮ್ ಕಡಿಮೆ ಇನಿಂಗ್ಸ್‌ನಲ್ಲಿ ಸಾವಿರ ರನ್ ಪೂರೈಸಿದ್ದಲ್ಲದೆ ಅತ್ಯಂತ ಕಡಿಮೆ ಅವಧಿಯಲ್ಲಿ(2 ವರ್ಷ,58 ದಿನಗಳು) ಈ ಮೈಲುಗಲ್ಲು ತಲುಪಿದ ಸಾಧನೆ ಮಾಡಿದರು. ಈ ಹಿಂದೆ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ 2 ವರ್ಷ, 262 ದಿನಗಳಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ ಟಿ-20ಯಲ್ಲಿ ಸಾವಿರ ರನ್ ಪೂರೈಸಲು 5 ವರ್ಷ,112 ದಿನಗಳು ಬೇಕಾಗಿತ್ತು.

ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಆಝಮ್ ಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. 2017ರ ಜನವರಿಯಲ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 1,000 ರನ್ ಪೂರೈಸಿ ವೆಸ್ಟ್‌ಇಂಡೀಸ್‌ನ ಸರ್ ವಿವಿ ರಿಚರ್ಡ್, ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್, ಜೋನಾಥನ್ ಟ್ರಾಟ್ ಹಾಗೂ ದ.ಆಫ್ರಿಕದ ಕ್ವಿಂಟನ್ ಡಿಕಾಕ್ ದಾಖಲೆ ಸರಿಗಟ್ಟಿದ್ದರು. ಆಝಮ್ ಏಕದಿನ ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಲು 21 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.

24ರ ಹರೆಯದ ಬಾಬರ್ 2016ರ ಸೆ.7 ರಂದು ಟಿ-20 ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು. ಇದೀಗ ಅವರು ಒಟ್ಟು 1,021 ರನ್ ಗಳಿಸಿದ್ದು, ಔಟಾಗದೆ 97 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ಈ ವರ್ಷದ ಎಪ್ರಿಲ್ 2ರಂದು ವೆಸ್ಟ್‌ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News