×
Ad

ಭಾರತಕ್ಕೆ ಸರಣಿ ಗೆಲುವಿಗೆ ಇನ್ನೋಂದೇ ಮೆಟ್ಟಿಲು

Update: 2018-11-06 00:02 IST

ಇಂದು ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಟ್ವೆಂಟಿ -20 ಪಂದ್ಯ

ಲಕ್ನೋ, ನ.5: ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವೆ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯ ಮಂಗಳವಾರ ಲಕ್ನೋದಲ್ಲಿ ನಡೆಯಲಿದೆ.

ಭಾರತ ರವಿವಾರ ಕೋಲ್ಕತಾದಲ್ಲಿ ವಿಂಡೀಸ್ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯ ದಲ್ಲಿ ಗೆಲ್ಲುವುದರೊಂದಿಗೆ ಸತತ ಸೋಲಿನ ಸರಮಾಲೆಯನ್ನು ಕಳಚಿಕೊಂಡಿತ್ತು. ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.

ವೆಸ್ಟ್‌ಇಂಡೀಸ್ ವಿರುದ್ಧ ಭಾರತ 2014 ಮಾರ್ಚ್ 23ರಂದು ಬಾಂಗ್ಲಾದೇಶದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಜಯ ಗಳಿಸಿತ್ತು. ರೋಹಿತ್ ಶರ್ಮಾ ನಾಯಕತ್ವದ ಭಾರತದ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಗೆಲುವು ದಾಖಲಿಸಿದೆ. ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿ ಅವರು ಮೊದಲ ಬಾರಿಗೆ ತವರಿನಲ್ಲಿ ನಡೆಯುತ್ತಿರುವ ಟ್ವೆಂಟಿ-20 ಸರಣಿಯಲ್ಲಿ ತಂಡದಿಂದ ಹೊರಗುಳಿದಿದ್ದಾರೆ.

ರವಿವಾರ ನಡೆದ ಪಂದ್ಯದಲ್ಲಿ ಹಂಗಾಮಿ ನಾಯಕ ರೋಹಿತ್ ಶರ್ಮಾ(6), ಆರಂಭಿಕ ದಾಂಡಿಗ ಶಿಖರ್ ಧವನ್(3), ಲೋಕೇಶ್ ರಾಹುಲ್(16), ಯುವ ಆಟಗಾರ ರಿಷಭ್ ಪಂತ್ (1)ಮತ್ತು ಮನೀಷ್ ಪಾಂಡೆ (19)ವಿಫಲರಾಗಿದ್ದರು. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು 34 ಎಸೆತಗಳಲ್ಲಿ ಔಟಾಗದೆ 31 ರನ್ ಮತ್ತು ಚೊಚ್ಚಲ ಪಂದ್ಯವನ್ನಾಡಿದ ಕೃನಾಲ್ ಪಾಂಡ್ಯ ಔಟಾಗದೆ 21 ರನ್ ಗಳಿಸಿ ಭಾರತದ ಗೆಲುವಿಗೆ ನೆರವಾಗಿದ್ದರು.

ಬೌಲಿಂಗ್‌ನಲ್ಲಿ ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ 4 ಓವರ್‌ಗಳಲ್ಲಿ 13ಕ್ಕೆ 3 ವಿಕೆಟ್ ಉಡಾಯಿಸಿ ಮಿಂಚಿದ್ದರು. ವೇಗಿ ಖಲೀಲ್ ಅಹ್ಮದ್ 16ಕ್ಕೆ 1 , ಪಾಂಡ್ಯ 15ಕ್ಕೆ 1, ಉಮೇಶ್ ಯಾದವ್ 36ಕ್ಕೆ 1 ಮತ್ತು ಜಸ್‌ಪ್ರೀತ್ ಬುಮ್ರಾ 27ಕ್ಕೆ 1 ವಿಕೆಟ್ ಉಡಾಯಿಸಿದ್ದರು.

ಲಕ್ನೋದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆಯಲಿದ್ದು, ವೇಗಿ ಭುವನೇಶ್ವರ್ ಕುಮಾರ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.

ವೆಸ್ಟ್‌ಇಂಡೀಸ್ ಈಗಾಗಲೇ ಭಾರತ ಪ್ರವಾಸದಲ್ಲಿ ಟೆಸ್ಟ್ ನಲ್ಲಿ 0-2 ಹಾಗೂ ಏಕದಿನ ಸರಣಿಯನ್ನು 1-3 ಅಂತರದಲ್ಲಿ ಕಳೆದುಕೊಂಡಿದೆ. ಟ್ವೆಂಟಿ-20 ಸರಣಿಯನ್ನು ಗೆಲ್ಲಬೇಕಾದರೆ ಸರಣಿಯಲ್ಲಿ ಉಳಿದಿರುವ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ದೊಂದಿಗೆ ಜಯ ಗಳಿಸಬೇಕಾಗಿದೆ. ವಿಂಡೀಸ್‌ನ ಖ್ಯಾತ ಆಟಗಾರರಾದ ಕೀರನ್ ಪೊಲಾರ್ಡ್ ಮತ್ತು ಡರೆನ್ ಬ್ರಾವೊ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದರು. ಆ್ಯಂಡ್ರೆ ರಸ್ಸೆಲ್ ಗಾಯಗೊಂಡು ಸರಣಿಯಿಂದ ದೂರ ಉಳಿದಿರುವ ಹಿನ್ನೆಲೆಯಲ್ಲಿ ವಿಂಡೀಸ್ ಸಮಸ್ಯೆ ಎದುರಿಸುವಂತಾಗಿದೆ. ನಾಯಕ ಕಾರ್ಲೊಸ್ ಬ್ರಾಥ್‌ವೇಟ್ (21ಕ್ಕೆ 2) ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಬ್ಯಾಟಿಂಗ್‌ನಲ್ಲಿ 11 ಎಸೆತಗಳನ್ನು ಎದುರಿಸಿ ಕೇವಲ 4 ರನ್ ಗಳಿಸಿದ್ದಾರೆ. ಯುವ ವೇಗಿ ಒಶಾನೆ ಥಾಮಸ್ ತನ್ನ ಚೊಚ್ಚಲ ಪಂದ್ಯದಲ್ಲಿ 21ಕ್ಕೆ 2 ವಿಕೆಟ್ ಉಡಾಯಿಸಿ ಭಾರತದ ಆರಂಭಿಕ ದಾಂಡಿಗರ ಸ್ಫೋಟಕ ಬ್ಯಾಟಿಂಗ್‌ಗೆ ಅಡ್ಡಿಪಡಿಸಿದ್ದರು.  ಭಾರತ : ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಲೋಕೇಶ್ ರಾಹುಲ್, ದಿನೇಶ್ ಕಾರ್ತಿಕ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೃನಾಲ್ ಪಾಂಡ್ಯ, ವಾಶಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಕುಲ್‌ದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಕೆ. ಖಲೀಲ್ ಅಹ್ಮದ್, ಉಮೇಶ್ ಯಾದವ್, ಶಾಬಾಝ್ ನದೀಮ್.

ವೆಸ್ಟ್‌ಇಂಡೀಸ್: ಕಾರ್ಲೊಸ್ ಬ್ರಾಥ್‌ವೇಟ್(ನಾಯಕ), ಡರೆನ್ ಬ್ರಾವೊ, ಶಿಮ್ರಾನ್ ಹೆಟ್ಮೆಯರ್, ಶಾಯ್ ಹೋಪ್, ಒಬೆಡ್ ಮೆಕ್ವಾಯ್, ಕೀಮೊ ಪೌಲ್, ಖಾರಿ ಪಿಯರ್,ಕೀರನ್ ಪೊಲಾರ್ಡ್, ನಿಕೊಲಸ್ ಪೊರಾನ್, ರೊವ್‌ಮ್ಯಾನ್ ಪೊವೆಲ್, ದಿನೇಶ್ ರಾಮ್‌ದಿನ್, ಶೆರ್ಫಾನೆ ರುದರ್‌ಫೋರ್ಡ್, ಒಶಾನೆ ಥಾಮಸ್.

ಪಂದ್ಯದ ಸಮಯ: ರಾತಿ್ರ

7 ಗಂಟೆಗೆ ಆರಂಭ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News