ಕಿವೀಸ್ ವಿರುದ್ದ ಕ್ಲೀನ್‌ಸ್ವೀಪ್ ಸಾಧಿಸಿದ ಪಾಕ್
ದುಬೈ, ನ.5: ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟದ ಹೊರತಾಗಿಯೂ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ ತಂಡ 47 ರನ್‌ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ.
ಕಳೆದ ತಿಂಗಳು ಆಸ್ಟ್ರೇಲಿಯ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದ್ದ ಪಾಕಿಸ್ತಾನ ಇದೀಗ ಸತತ ಎರಡನೇ ಬಾರಿ ಈ ಸಾಧನೆ ಮಾಡಿದೆ. ಸರ್ಫರಾಝ್ ಅಹ್ಮದ್ ನೇತೃತ್ವದಲ್ಲಿ ಪಾಕ್ ತಂಡ ಸತತ 11ನೇ ಸರಣಿಯನ್ನು ಜಯಿಸಿತು. ಈ ವರ್ಷ ಪಾಕ್ ಕೇವಲ 2 ಟಿ-20 ಪಂದ್ಯಗಳನ್ನು ಸೋತಿದೆ.
ರವಿವಾರ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಪಾಕಿಸ್ತಾನದ ನಾಯಕ ಸರ್ಫರಾಝ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಬಾಬರ್ ಆಝಮ್(79 ರನ್, 58 ಎಸೆತ) ಹಾಗೂ ಮುಹಮ್ಮದ್ ಹಫೀಝ್(ಔಟಾಗದೆ 53,34 ಎಸೆತ) ಅರ್ಧಶತಕಗಳ ಕೊಡುಗೆ ನೀಡಿ ಪಾಕ್ ತಂಡ 3 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಲು ನೆರವಾದರು.
ಪಾಕಿಸ್ತಾನದ 166 ರನ್‌ಗೆ ಉತ್ತರಿಸಹೊರಟ ನ್ಯೂಝಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ 38 ಎಸೆತಗಳಲ್ಲಿ 60 ರನ್ ಗಳಿಸಿದರು. ಆದರೆ, ಪಾಕಿಸ್ತಾನದ ಸ್ಪಿನ್ನರ್‌ಗಳಿಗೆ ನ್ಯೂಝಿಲೆಂಡ್‌ನ ಉಳಿದ ಆಟಗಾರರು ನಿರುತ್ತರವಾಗಿ 16.5 ಓವರ್‌ಗಳಲ್ಲಿ 119 ರನ್‌ಗೆ ಗಂಟುಮೂಟೆ ಕಟ್ಟಿದರು.
ಲೆಗ್ ಸ್ಪಿನ್ನರ್ ಶಾದಾಬ್ ಖಾನ್(3-30)ಯಶಸ್ವಿ ಬೌಲರ್ ಎನಿಸಿಕೊಂಡರು. ವಿಲಿಯಮ್ಸನ್ ಹಾಗೂ ಗ್ಲೆನ್ ಫಿಲಿಪ್ಸ್(26)ಔಟಾದ ಬೆನ್ನಿಗೆ ದಿಢೀರ್ ಕುಸಿತ ಕಂಡ ಕಿವೀಸ್ 23 ರನ್ ಗಳಿಸುವಷ್ಟರಲ್ಲಿ ಕೊನೆಯ 8 ವಿಕೆಟ್‌ಗಳನ್ನು ಕಳೆದುಕೊಂಡಿತು.
ಎಡಗೈ ಸ್ಪಿನ್ನರ್ ಇಮಾದ್ ವಸೀಂ(2-28) ಮಾರ್ಕ್ ಚಾಂಪ್‌ಮನ್ ಹಾಗೂ ಟಿಮ್ ಸೆಫೆರ್ಟ್ ವಿಕೆಟನ್ನು ಸತತ ಎಸೆತಗಳಲ್ಲಿ ಉರುಳಿಸಿದರು.
ಚೊಚ್ಚಲ ಪಂದ್ಯವನ್ನಾಡಿದ ವೇಗದ ಬೌಲರ್ ವಕಾಸ್ ಮಕ್ಸೂದ್(2-21)ನ್ಯೂಝಿಲೆಂಡ್‌ನ ಕೊನೆಯ 2 ವಿಕೆಟ್‌ಗಳನ್ನು ಉರುಳಿಸಿದರು.
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಹೋರಾಟ ನೀಡಿದ್ದ ಕಿವೀಸ್ ಕೊನೆಯ ಪಂದ್ಯದಲ್ಲಿ ನಿರುತ್ಸಾಹ ತೋರಿತು. ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಆರಂಭಿಕ ಆಟಗಾರ ಮುನ್ರೊ(2) ವಿಕೆಟ್ ಉರುಳಿತು. ಗ್ರಾಂಡ್‌ಹೋಮ್(6)ರನೌಟಾದರು. ಪಾಕ್‌ಗೆ ಕ್ಲೀನ್‌ಸ್ವೀಪ್ ನಿರಾಕರಿಸಲು ಹೋರಾಡಿದ ವಿಲಿಯಮ್ಸನ್‌ಗೆ ಯಾರೂ ಸಾಥ್ ನೀಡಲಿಲ್ಲ.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡಕ್ಕೆ ಆಝಮ್ ಹಾಗೂ ಮುಹಮ್ಮದ್ ಹಫೀಝ್ ಮತ್ತೊಮ್ಮೆ ಆಧಾರವಾದರು. ಈ ಜೋಡಿ 2ನೇ ವಿಕೆಟ್‌ಗೆ 64 ಎಸೆತಗಳಲ್ಲಿ 94 ರನ್ ಜೊತೆಯಾಟ ನಡೆಸಿ ಪ್ರಸ್ತುತ ಸರಣಿಯಲ್ಲಿ ಪಾಕ್ ತಂಡ ಗರಿಷ್ಠ ಸ್ಕೋರ್ ಗಳಿಸಲು ನೆರವಾಯಿತು.
ಇದೀಗ ಉಭಯ ತಂಡಗಳು 3 ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ಬುಧವಾರ ಅಬುಧಾಬಿಯಲ್ಲಿ ಮೊದಲ ಪಂದ್ಯವನ್ನು ಆಡಲಿವೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 20 ಓವರ್‌ಗಳಲ್ಲಿ 166/3
(ಬಾಬರ್ ಆಝಮ್ 79, ಮುಹಮ್ಮದ್ ಹಫೀಝ್ ಔಟಾಗದೆ 53, ಮಲಿಕ್ 19, ಗ್ರಾಂಡ್‌ಹೋಮ್ 2-41)
ನ್ಯೂಝಿಲೆಂಡ್: 16.5 ಓವರ್‌ಗಳಲ್ಲಿ 119 ರನ್‌ಗೆ ಆಲೌಟ್
(ವಿಲಿಯಮ್ಸನ್ 60, ಫಿಲಿಪ್ಸ್ 26, ಶಾದಾಬ್ ಖಾನ್ 3-30, ಮಕ್ಸೂದ್ 2-21, ವಸೀಂ 2-28)
ಪಂದ್ಯಶ್ರೇಷ್ಠ: ಬಾಬರ್ ಆಝಮ್
ಸರಣಿಶ್ರೇಷ್ಠ: ಮುಹಮ್ಮದ್ ಹಫೀಝ್.