ಪಾಕ್‌ಗೆ ವೀಸಾ ನೀಡಲು ಭಾರತ ಮೀನಮೇಷ
ಹೊಸದಿಲ್ಲಿ, ನ.5: ಪಾಕಿಸ್ತಾನ ತಂಡ ಈ ತಿಂಗಳಾಂತ್ಯದಲ್ಲಿ ಭುವನೇಶ್ವರದಲ್ಲಿ ನಡೆಯುವ ಹಾಕಿ ವಿಶ್ವಕಪ್‌ನಲ್ಲಿ ಆಡುವ ನಿರೀಕ್ಷೆಯಲ್ಲಿದೆ. ಕಳೆದ ತಿಂಗಳು ಪಾಕ್ ಹಾಕಿ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದು ಭಾರತ ಈಗಲೂ ಅರ್ಜಿಯನ್ನು ವಿಲೇವಾರಿ ಮಾಡಿಲ್ಲ.
ಇತ್ತೀಚೆಗಿನ ದಿನಗಳಲ್ಲಿ ಉಭಯ ದೇಶಗಳ ಕ್ರೀಡಾಸಂಬಂಧ ಉತ್ತಮವಾಗಿಲ್ಲ. ಭಾರತ ವೀಸಾ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ 2016ರಲ್ಲಿ ಭಾರತದಲ್ಲಿ ನಡೆದಿದ್ದ ಜೂನಿಯರ್ ವಿಶ್ವಕಪ್‌ನಿಂದ ಪಾಕ್ ತಂಡ ಹಿಂದೆ ಸರಿದಿತ್ತು. ಪಾಕಿಸ್ತಾನ ತಂಡ ಅಧಿಕೃತ ಗಡುವು ಮುಗಿದ ಬಳಿಕ ವೀಸಾಕ್ಕೆ ಅರ್ಜಿ ಸಲ್ಲಿಸಿತ್ತು.
ಪಾಕಿಸ್ತಾನ ಹಾಕಿ ತಂಡಕ್ಕೆ ವಿಶ್ವಕಪ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್ ಸರಕಾರವನ್ನು ವಿನಂತಿಸಿದೆ ಎಂದು ತಿಳಿದುಬಂದಿದೆ. ಯಾವುದೇ ನಿರ್ಧಾರ ಸರಕಾರದ ಉನ್ನತ ಮಟ್ಟದಲ್ಲಿ ಅನುಮೋದನೆಯಾಗಬೇಕಾಗಿದೆ’’ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಹಾಕಿ ತಂಡ 2014ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಕೊನೆಯ ಬಾರಿ ಆಡಿತ್ತು. ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಮಣಿಸಿತ್ತು. ಫೈನಲ್‌ನಲ್ಲಿ ಪಾಕಿಸ್ತಾನ ಆಟಗಾರರು ಪ್ರೇಕ್ಷಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರೆಂಬ ಆರೋಪವೂ ಕೇಳಿಬಂದಿತ್ತು. ಏಶ್ಯನ್ ಕುಸ್ತಿ ಕ್ರೀಡಾಕೂಟದಲ್ಲಿ ಸ್ಪರ್ಧಿಸಬೇಕಾಗಿದ್ದ ತನ್ನ ದೇಶದ ಕುಸ್ತಿಪಟುಗಳಿಗೆ ಭಾರತ ವೀಸಾ ನಿರಾಕರಿಸಿತ್ತು ಎಂದು ಪಾಕಿಸ್ತಾನ ಕಳೆದ ವರ್ಷ ಆರೋಪಿಸಿತ್ತು.