×
Ad

ದಿಲ್ಲಿ ತಂಡದ ನಾಯಕತ್ವ ತ್ಯಜಿಸಿದ ಗಂಭೀರ್

Update: 2018-11-06 00:18 IST

ಹೊಸದಿಲ್ಲಿ, ನ.5: ಹಿರಿಯ ದಾಂಡಿಗ ಗೌತಮ್ ಗಂಭೀರ್ ದಿಲ್ಲಿ ರಣಜಿ ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಗಂಭೀರ್ ಅವರಿಂದ ತೆರವಾದ ಸ್ಥಾನಕ್ಕೆ ನಿತೀಶ್ ರಾಣಾ ಆಯ್ಕೆಯಾಗಿದ್ದಾರೆ.

‘‘ನಾಯಕತ್ವ ತ್ಯಜಿಸುವುದಾಗಿ ಗಂಭೀರ್ ಅವರು ರಾಜ್ಯ ತಂಡದ ಮುಖ್ಯ ಆಯ್ಕೆಗಾರ ಅಮಿತ್ ಭಂಡಾರಿಗೆ ತಿಳಿಸಿದ್ದಾರೆ. ತನ್ನಿಂದ ತೆರವಾದ ಸ್ಥಾನಕ್ಕೆ ಯುವ ಆಟಗಾರನನ್ನು ಆಯ್ಕೆ ಮಾಡುವಂತೆ ಗಂಭೀರ್ ಸಲಹೆ ನೀಡಿದ್ದಾರೆ. ನಿತೀಶ್ ರಾಣಾ ದಿಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದು, ಧುೃವ ಶೋರೆ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ’’ ಎಂದು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಹಿರಿಯ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

24ರ ಹರೆಯದ ರಾಣಾ ಮಧ್ಯಮ ಸರದಿ ದಾಂಡಿಗನಾಗಿದ್ದು ಈ ವರೆಗೆ 24 ಪ್ರಥಮ ದರ್ಜೆ ಪಂದ್ಯಗಳಲ್ಲಿ 46.29ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 26ರ ಹರೆಯದ ಶೋರೆ 21 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು, ಅಗ್ರ ಕ್ರಮಾಂಕದ ದಾಂಡಿಗ ನಾಗಿದ್ದಾರೆ.

ದಿಲ್ಲಿ ತಂಡ ನ.12 ರಂದು ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ಗಂಭೀರ್ ಈ ಋತುವಿನ ಆರಂಭದಲ್ಲಿ ನಾಯಕನಾಗಿ ನೇಮಕಗೊಂಡಿದ್ದರು. ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ತಂಡವನ್ನು ಫೈನಲ್ ತನಕ ಮುನ್ನಡೆಸಿದ್ದ ಗಂಭೀರ್ ಆ ಟೂರ್ನಿಯಲ್ಲಿ ಸುಮಾರು 500 ರನ್ ಗಳಿಸಿದ್ದರು.

37ರ ಹರೆಯದ ಗಂಭೀರ್ ಈ ವರ್ಷ ರಣಜಿ ಟೂರ್ನಿಯಲ್ಲಿ ಎಲ್ಲ ಪಂದ್ಯಗಳಲ್ಲಿ ಆಡುವ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಇದೀಗ ನಾಯಕತ್ವವನ್ನು ತ್ಯಜಿಸಿರುವ ಗಂಭೀರ್ ಇನ್ನು ದೀರ್ಘಸಮಯ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡುವುದಿಲ್ಲ ಎಂಬ ಸುಳಿವು ನೀಡಿದ್ದಾರೆ. ತಂಡದಲ್ಲಿ ಶಿಖರ್ ಧವನ್ ಹಾಗೂ ರಿಷಭ್ ಪಂತ್ ಅವರಿಲ್ಲ. ಹೀಗಾಗಿ ಗಂಭೀರ್ ಅಗತ್ಯ ತಂಡಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News