ಕ್ಯಾಲಿಫೋರ್ನಿಯದಲ್ಲಿ ಕಾಡ್ಗಿಚ್ಚು ಸ್ಫೋಟ: 9 ಸಾವು;
ಪ್ಯಾರಡೈಸ್ (ಕ್ಯಾಲಿಫೋರ್ನಿಯ), ನ. 10: ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದಾದ್ಯಂತ ಶುಕ್ರವಾರ ಕಾಡ್ಗಿಚ್ಚು ದಾಂಧಲೆ ನಡೆಸಿದೆ. ಧಗಧಗಿಸುವ ಬೆಂಕಿಗೆ ಗುಡ್ಡಗಾಡು ಪಟ್ಟಣ ಪ್ಯಾರಡೈಸ್‌ನಲ್ಲಿ ಒಂಬತ್ತು ಮಂದಿ ಬಲಿಯಾಗಿದ್ದಾರೆ.
ಅದೇ ವೇಳೆ, ಬಿಸಿ ಗಾಳಿಯ ಧಗೆಗೆ ಬೆದರಿ ಸಮುದ್ರ ತೀರದ ಮಲಿಬು ಎಂಬ ಗ್ರಾಮದ ನಿವಾಸಿಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ.
ಪ್ಯಾರಡೈಸ್ ಪಟ್ಟಣದಲ್ಲಿ 6,700ಕ್ಕೂ ಅಧಿಕ ಮನೆಗಳು ಮತ್ತು ವ್ಯಾಪಾರಿ ಕಟ್ಟಡಗಳು ಸುಟ್ಟು ಹೋಗಿವೆ ಎಂದು ಕ್ಯಾಲಿಫೋರ್ನಿಯದ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಪ್ರಸಕ್ತ ಕಾಡ್ಗಿಚ್ಚು ರಾಜ್ಯದ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಎಂದು ಹೇಳಲಾಗಿದೆ.
ಈ ಪಟ್ಟಣದಲ್ಲಿ ಒಂಬತ್ತು ಮಂದಿ ಮೃತಪಡುವ ಜೊತೆಗೆ 35 ಮಂದಿ ನಾಪತ್ತೆಯಾಗಿದ್ದಾರೆ ಹಾಗೂ ಮೂರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ.
ಪ್ಲುಮಾಸ್ ರಾಷ್ಟ್ರೀಯ ಕಾಡಿನ ಅಂಚಿನಲ್ಲಿ ಗುರುವಾರ ಆರಂಭವಾದ ಬೆಂಕಿ 90,000 ಎಕರೆಗೂ ಹೆಚ್ಚು ಪ್ರದೇಶವನ್ನು ಸುಟ್ಟು ಹಾಕಿದೆ ಹಾಗೂ ಶುಕ್ರವಾರ ಸಂಜೆಯ ಹೊತ್ತಿಗೆ ಕೇವಲ 5 ಶೇಕಡ ಬೆಂಕಿಯನ್ನು ನಿಯಂತ್ರಿಸಲಾಗಿದೆ.