2020ರಲ್ಲಿ ಅಮೆರಿಕ ಅಧ್ಯಕ್ಷತೆಗೆ ತುಳಸಿ ಗಬ್ಬಾರ್ಡ್ ಸ್ಪರ್ಧೆ?

Update: 2018-11-12 16:25 GMT

ವಾಶಿಂಗ್ಟನ್, ನ. 12: 2020ರಲ್ಲಿ ಅಮೆರಿಕದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಅಮೆರಿಕದ ಹಿಂದೂ ಸಂಸದೆ ತುಳಸಿ ಗಬ್ಬಾರ್ಡ್ ಚಿಂತನೆ ನಡೆಸಿದ್ದಾರೆ ಎಂದು ಅವರಿಗೆ ನಿಕಟವಾಗಿರುವ ಮೂಲಗಳು ತಿಳಿಸಿವೆ.

ಲಾಸ್ ಏಂಜಲಿಸ್‌ನಲ್ಲಿ ಶುಕ್ರವಾರ ನಡೆದ ಮೆಡ್‌ಟ್ರಾನಿಕ್ ಸಮ್ಮೇಳನದಲ್ಲಿ, ಪ್ರತಿಷ್ಠಿತ ಭಾರತೀಯ ಅಮೆರಿಕನ್ ಡಾ. ಸಂಪತ್ ಶಿವಾಂಗಿ, 37 ವರ್ಷದ ತುಳಸಿ ಗಬ್ಬಾರ್ಡ್ರನ್ನು ಪರಿಚಯಿಸಿದರು. 2020ರಲ್ಲಿ ಅವರು ಅಮೆರಿಕದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ ಎಂದು ಸಂಪತ್ ಹೇಳಿದರು.

ಈ ಸುದ್ದಿಗೆ ಸಭಿಕರು, ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರತಿಕ್ರಿಯಿಸಿದರು.

ಡೆಮಾಕ್ರಟಿಕ್ ಪಕ್ಷದ ತುಳಸಿ ಹವಾಯಿ ರಾಜ್ಯದಿಂದ ನಾಲ್ಕು ಬಾರಿ ಸಂಸತ್ ಕಾಂಗ್ರೆಸ್‌ಗೆ ಆಯ್ಕೆಯಾಗಿದ್ದಾರೆ.

ಬಳಿಕ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, 2020ರಲ್ಲಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದನ್ನು ಖಚಿತಪಡಿಸಲೂ ಇಲ್ಲ, ನಿರಾಕರಿಸಲೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News