ಝಿಂಬಾಬ್ವೆ ಗೆಲುವಿಗೆ 443 ರನ್ ಗುರಿ

Update: 2018-11-14 18:14 GMT

2ನೇ ಟೆಸ್ಟ್

ಢಾಕಾ, ನ.14: ಮಹ್ಮೂದುಲ್ಲಾ ರಿಯಾದ್ ಎಂಟು ವರ್ಷಗಳ ಬಳಿಕ ಮೊದಲ ಬಾರಿ ಸಿಡಿಸಿದ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಝಿಂಬಾಬ್ವೆ ತಂಡಕ್ಕೆ ಎರಡನೇ ಟೆಸ್ಟ್ ಪಂದ್ಯದ ಗೆಲುವಿಗೆ 443 ರನ್ ಕಠಿಣ ಗುರಿ ನೀಡಿದೆ.

ಬುಧವಾರ ನಾಲ್ಕನೇ ದಿನದಾಟದಂತ್ಯಕ್ಕೆ ಝಿಂಬಾಬ್ವೆ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಹ್ಯಾಮಿಲ್ಟನ್ ಮಸಕಝ(25) ಹಾಗೂ ಬ್ರಿಯಾನ್ ಚಾರಿ(43)ಮೊದಲ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿದರು. ಆಫ್-ಸ್ಪಿನ್ನರ್ ಮೆಹಿದಿ ಹಸನ್ ಮೊದಲ ವಿಕೆಟ್ ಜೊತೆಯಾಟವನ್ನು ಮುರಿದರು. ಖಾತೆ ತೆರೆಯುವ ಮೊದಲೇ ಜೀವದಾನ ಪಡೆದು 43 ರನ್ ಗಳಿಸಿದ್ದ ಬ್ರಿಯಾನ್‌ಗೆ ಸ್ಪಿನ್ನರ್ ತೈಜುಲ್ ಇಸ್ಲಾಮ್ ಪೆವಿಲಿಯನ್ ಹಾದಿ ತೋರಿಸಿದರು.

ದಿನದಾಟದಂತ್ಯಕ್ಕೆ ಬ್ರೆಂಡನ್ ಟೇಲರ್(4) ಹಾಗೂ ಸಿಯಾನ್ ವಿಲಿಯಮ್ಸ್(2)ಕ್ರೀಸ್ ಕಾಯ್ದುಕೊಂಡಿದ್ದಾರೆ. ಝಿಂಬಾಬ್ವೆ ಪಂದ್ಯವನ್ನು ಗೆಲ್ಲಲು ಅಥವಾ ಡ್ರಾ ಸಾಧಿಸಲು ಭಾರೀ ಬೆವರಿಳಿಸುವ ಅಗತ್ಯವಿದೆ. ಮೊದಲ ಪಂದ್ಯವನ್ನು ಜಯಿಸಿರುವ ಝಿಂಬಾಬ್ವೆ 7 ವರ್ಷಗಳ ಬಳಿಕ ಸರಣಿ ಜಯಿಸಬೇಕಾದರೆ ಪಂದ್ಯ ಡ್ರಾಗೊಳಿಸುವ ಅಗತ್ಯವಿದೆ.

ಬಾಂಗ್ಲಾದೇಶಕ್ಕೆ ಸರಣಿಯನ್ನು ಸಮಬಲಗೊಳಿಸಲು ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

ಇದಕ್ಕೂ ಮೊದಲು ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ 218 ರನ್ ಮುನ್ನಡೆ ಪಡೆದರೂ ಎದುರಾಳಿ ತಂಡಕ್ಕೆ ಫಾಲೋ-ಆನ್ ಹೇರದೇ ಎರಡನೇ ಇನಿಂಗ್ಸ್ ಆರಂಭಿಸಿತು. ಆಲ್‌ರೌಂಡರ್ ಮಹ್ಮೂದುಲ್ಲಾ ಲೆಗ್ ಸ್ಪಿನ್ನರ್ ಬ್ರೆಂಡನ್ ಮವುಟ ಎಸೆತದಲ್ಲಿ 2 ರನ್ ಗಳಿಸಿ 2ನೇ ಶತಕ ಪೂರೈಸಿದ ಬೆನ್ನಿಗೇ 6 ವಿಕೆಟ್‌ಗಳ ನಷ್ಟಕ್ಕೆ 224 ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿ ಝಿಂಬಾಬ್ವೆಗೆ ಗೆಲ್ಲಲು ಕಠಿಣ ಗುರಿ ನೀಡಿತು.

ಬಾಂಗ್ಲಾದೇಶ ತಂಡ 25 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆರಂಭಿಕ ಆಟಗಾರರಾದ ಇಮ್ರುಲ್ ಕಯೆಸ್(3) ಹಾಗೂ ಲಿಟನ್ ದಾಸ್(6)ಮೂರು ಎಸೆತಗಳ ಅಂತರದಲ್ಲಿ ಅಲ್ಪ ಮೊತ್ತಕ್ಕೆ ಔಟಾದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಮೊಮಿನುಲ್ ಹಕ್(1) ಹಾಗೂ ದ್ವಿಶತಕ ಸಿಡಿಸಿದ್ದ ಮುಶ್ಫಿಕುರ್ರಹೀಂ(7 ರನ್)ಬೇಗನೆ ಔಟಾದರು. ಆಗ ಚೊಚ್ಚಲ ಪಂದ್ಯವನ್ನಾಡುತ್ತಿರುವ ಮುಹಮ್ಮದ್ ಮಿಥುನ್(67 ರನ್, 110 ಎಸೆತ)ಅವರೊಂದಿಗೆ 6ನೇ ವಿಕೆಟ್‌ಗೆ 118 ರನ್ ಜೊತೆಯಾಟ ನಡೆಸಿದ ಮಹ್ಮೂದುಲ್ಲಾ ತಂಡವನ್ನು ಆಧರಿಸಿದರು. 2010ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಚೊಚ್ಚಲ ಶತಕ ಸಿಡಿಸಿದ್ದ ಮಹ್ಮೂದುಲ್ಲಾ ಇಂದು 122 ಎಸೆತಗಳನ್ನು ಎದುರಿಸಿ 4 ಬೌಂಡರಿ, 2 ಸಿಕ್ಸರ್‌ಗಳನ್ನು ಸಿಡಿಸಿ ಔಟಾಗದೆ ಉಳಿದರು. ಝಿಂಬಾಬ್ವೆ ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶದ 7ಕ್ಕೆ 522 ರನ್‌ಗೆ ಉತ್ತರವಾಗಿ 304 ರನ್‌ಗೆ ಆಲೌಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News