ಭಾರತಕ್ಕೆ ಸೆಮಿ ಫೆನಲ್ ಗುರಿ

Update: 2018-11-14 18:26 GMT

ಗಯಾನ, ನ.14: ವನಿತೆಯರ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪುವ ಗುರಿ ಹಾಕಿಕೊಂಡಿರುವ ಭಾರತದ ತಂಡ ಗುರುವಾರ ಇಲ್ಲಿ ನಡೆಯಲಿರುವ ‘ಬಿ’ ಗುಂಪಿನ ತನ್ನ 3ನೇ ಪಂದ್ಯದಲ್ಲಿ ಐರ್ಲೆಂಡ್‌ನ್ನು ಎದುರಿಸಲಿದೆ.

ಭಾರತ ಕಳೆದ ಎರಡು ಪಂದ್ಯಗಳಲ್ಲ್ಲಿ ಜಯ ಗಳಿಸಿತ್ತು. ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ಮತ್ತು ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಜಯ ಗಳಿಸಿತ್ತು.

ನಾಯಕಿ ಹರ್ಮನ್‌ಪ್ರೀತ್ ಕೌರ್ ನ್ಯೂಝಿಲೆಂಡ್ ವಿರುದ್ಧ ಗಯಾನ ಪ್ರಾವಿಡೆನ್ಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸ್ಫೋಟಕ ಶತಕ ದಾಖಲಿಸಿದ್ದರು. ಅದೇ ಕ್ರೀಡಾಂಗಣದಲ್ಲಿ ಮೂರನೇ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯ ಮತ್ತು ಪಾಕಿಸ್ತಾನ ವಿರುದ್ಧ ಆಡಿರುವ ಎರಡು ಪಂದ್ಯಗಳಲ್ಲಿ ಐರ್ಲೆಂಡ್ ತಂಡ ಸೋಲು ಅನುಭವಿಸಿದೆ. ಆದರೆ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಐರ್ಲೆಂಡ್ ವಿರುದ್ಧ ಜಯ ಗಳಿಸಿದರೆ ಭಾರತಕ್ಕೆ ಅಂತಿಮ ನಾಲ್ಕರಲ್ಲಿ ಸ್ಥಾನ ದೃಢಪಡಿಸಲು ಸಾಧ್ಯವಾಗುತ್ತದೆ. ನಾಯಕಿ ಕೌರ್ ಮೊದಲ ಪಂದ್ಯದಲ್ಲಿ ಶತಕದ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದರು. ಎರಡನೇ ಪಂದ್ಯದಲ್ಲಿ ಅನುಭವಿ ಮಿಥಾಲಿ ರಾಜ್ ಅರ್ಧಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಜೆಮೀಮಾ ರೋಡ್ರಿಗಸ್ ಅರ್ಧಶತಕ ಬಾರಿಸುವ ಮೂಲಕ ಟ್ವೆಂಟಿ-20 ಕ್ರಿಕೆಟ್ ನಲ್ಲಿ ವೃತ್ತಿಬದುಕು ಆರಂಭಿಸಿದ್ದರು. ಸ್ಮತಿ ಮಂಧಾನ ಮತ್ತು ವೇದಾ ಕೃಷ್ಣಮೂರ್ತಿ ಅವರು ಐರ್ಲೆಂಡ್ ವಿರುದ್ಧ ಚೆನ್ನಾಗಿ ಆಡುವ ಯೋಜನೆಯಲ್ಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ಡಿ.ಹೇಮಲತಾ ಮತ್ತು ಲೆಗ್ ಸ್ಪಿನ್ನರ್ ಪೂನಮ್ ಯಾದವ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು 2 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಮುಂದಿನ ಪಂದ್ಯದಲ್ಲಿ ವೇಗಿಗಳು ಮಿಂಚುವುದನ್ನು ನಿರೀಕ್ಷಿಸಲಾಗಿದೆ.

ತಂಡಗಳು

►ಭಾರತ: ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮತಿ ಮಂಧಾನ, ಮಿಥಾಲಿ ರಾಜ್, ಜೆಮೀಮಾ ರೋಡ್ರಿಗಸ್, ವೇದಾ ಕೃಷ್ಣ ಮೂರ್ತಿ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ, ಪೂನಮ್ ಯಾದವ್, ರಾಧಾ ಯಾದವ್, ಅನುಜಾ ಪಾಟೀಲ್, ಏಕತಾ ಬಿಸ್ತ್, ಡಿ.ಹೇಮಲತಾ, ಮನ್ಸಿ ಜೋಶಿ, ಪೂಜಾ ವಸ್ತ್ರಕರ್, ಆರುಂಧತಿ ರೆಡ್ಡಿ.

► ಐರ್ಲೆಂಡ್: ಲಾವುರಾ ಡೆಲಾನಿ(ನಾಯಕಿ), ಕಿಮ್ ಗ್ಯಾರೆತ್, ಸಿಸಿಲಿಯಾ ಜೋಯ್ಸಾ, ಇಸೊಬೆಲ್ ಜೋಯ್ಸಾ, ಶೌನಾ ಕವಾನಗ್, ಅಮಿ ಕೆನೆಲೈ, ಗಾಬೈ ಲೆವಿಸ್, ಶಾಹುನ್ ಕವಾನಗ್, ಲಾರಾ ಮಾರ್ಟಿಝ್, ಕ್ಲೇರಾ ಮೆಟ್‌ಕಾಲ್ಫೆ , ಲೂಸಿ ಒರೆಲೈ, ಸೆಲೆಸ್ಟೆ ರಾಕ್‌ಎಮಿಯರ ರಿಚರ್ಡ್ಸನ್, ಕ್ಲಾರೆ ಶಿಲ್ಲಿಂಗ್‌ಟನ್, ರೆಬೇಕಾ ಸ್ಟೋಕೆಲ್, ಮೇರಿ ವಾಲ್ಡ್ರಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News