ಲಯನ್ ಏರ್ ವಿಮಾನ ದುರಂತದಲ್ಲಿ ಮೃತಪಟ್ಟ ವರ: ಮದುವೆ ದಿನ ವಧು ಮಾಡಿದ್ದೇನು ಗೊತ್ತಾ ?

Update: 2018-11-15 16:52 GMT

ಜಕಾರ್ತ, ನ. 15: ಇಂಡೋನೇಶ್ಯದಲ್ಲಿ ಸಂಭವಿಸಿದ ಲಯನ್ ಏರ್ ವಿಮಾನ ದುರಂತವು ಹಲವರ ಬದುಕನ್ನು ಶಾಶ್ವತವಾಗಿ ಬದಲಿಸಿದೆ. ಮಹಿಳೆಯೊಬ್ಬರ ಭಾವೀ ಪತಿ ಆ ವಿಮಾನದಲ್ಲಿ ಪ್ರಯಾಣಿಸಿದ್ದು ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಅವರ ಮದುವೆ ನಡೆಯಬೇಕಾಗಿದ್ದ ದಿನದಂದು ಮಹಿಳೆಯು ಮದುವೆ ಬಟ್ಟೆಯನ್ನು ತೊಟ್ಟು ಮರಳಿ ಬಾರದ ವರನಿಗೆ ತನ್ನ ಪ್ರೀತಿಯನ್ನು ತೋರ್ಪಡಿಸಿದ್ದಾರೆ.

ಇಂತಾನ್ ಸಯರಿಯರ ಭಾವೀ ಪತಿ ಡಾ. ರಿಯೊ ನಂದ ಪ್ರಥಮ್ ಆ ವಿಮಾನದಲ್ಲಿ ಪ್ರಯಾಣಿಸಿದ್ದರು. ಅವರ ಮದುವೆ ಕಳೆದ ರವಿವಾರ ನಡೆಯಬೇಕಾಗಿತ್ತು. ‘‘ಒಂದು ವೇಳೆ ನಾನು ಬರುವುದು ತಡವಾದರೆ ಮದುವೆಯ ದಿನದಂದು ಮದುವೆಯ ಬಟ್ಟೆಯನ್ನು ತೊಟ್ಟು ಶೃಂಗರಿಸಿಕೊಂಡು ಬಿಳಿ ಗುಲಾಬಿಗಳ ಗುಚ್ಛವನ್ನು ಹಿಡಿದುಕೊಂಡು ಒಳ್ಳೆಯ ಚಿತ್ರಗಳನ್ನು ತೆಗೆದು ನನಗೆ ಕಳುಹಿಸಬೇಕು ಎಂಬುದಾಗಿ ಪ್ರಥಮ್ ಹೇಳಿದ್ದರು’’ ಎಂದು ಇಂತಾನ್ ಅಸೋಸಿಯೇಟೆಡ್ ಪ್ರೆಸ್‌ಗೆ ಬುಧವಾರ ತಿಳಿಸಿದರು.

‘‘ಅವರು ಅದನ್ನು ತಮಾಷೆಗಾಗಿ ಹೇಳಿದ್ದರು’’ ಎಂದರು.

ಅದರಂತೆ ಇಂತಾನ್ ರವಿವಾರ ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಬಿಳಿ ಮದುವೆ ಬಟ್ಟೆಯನ್ನು ತೊಟ್ಟು, ಬಿಳಿಯ ತಲೆವಸ್ತ್ರವನ್ನು ಧರಿಸಿ, ಕೈಯಲ್ಲಿ ಬಿಳಿ ಗುಲಾಬಿಯ ಗುಚ್ಛವನ್ನು ಹಿಡಿದುಕೊಂಡು ಚಿತ್ರಗಳನ್ನು ತೆಗೆಸಿಕೊಂಡರು.

ಅಕ್ಟೋಬರ್ 29ರಂದು ಇಂಡೋನೇಶ್ಯದ ರಾಜಧಾನಿ ಜಕಾರ್ತದಿಂದ ಪಂಗ್‌ಕಲ್ ಪಿನಾಂಗ್ ಪಟ್ಟಣಕ್ಕೆ ಹಾರುತ್ತಿದ್ದ ವಿಮಾನವು ಜಾವಾ ಸಮುದ್ರದಲ್ಲಿ ಪತನಗೊಂಡು ಅದರಲ್ಲಿದ್ದ ಎಲ್ಲ 189 ಮಂದಿ ದುರಂತ ಅಂತ್ಯವನ್ನು ಕಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News