ಲಂಕಾ ಸಂಸತ್ತಿನಲ್ಲಿ ಮಾರಾಮಾರಿ: ಓರ್ವ ಸಂಸದ ಆಸ್ಪತ್ರೆಗೆ

Update: 2018-11-15 17:55 GMT

ಕೊಲಂಬೊ, ನ. 15: ಶ್ರೀಲಂಕಾದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟ ಗುರುವಾರ ವಿಕೋಪಕ್ಕೆ ಹೋಗಿದ್ದು, ಸಂಸತ್ತಿನಲ್ಲಿ ಎದುರಾಳಿ ಬಣಗಳ ಸಂಸದರು ಮುಷ್ಟಿಕಾಳಗ ನಡೆಸಿದ್ದಾರೆ.

ಹೊಡೆದಾಟದಲ್ಲಿ ಗಾಯಗೊಂಡ ಓರ್ವ ಸಂಸದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೋರ್ವ ಸಂಸದ ಚೂರಿ ಝಳಪಿಸಿದನೆಂದು ಆರೋಪಿಸಲಾಗಿದೆ.

ಬುಧವಾರ ನಡೆದ ವಿಶ್ವಾಸಮತದಲ್ಲಿ ಸೋಲುಂಡಿರುವ ನೇಮಿತ ಪ್ರಧಾನಿ ಮಹಿಂದ ರಾಜಪಕ್ಸರ ಬೆಂಬಲಿಗ ಸಂಸದರು ಗುರುವಾರ ಬೆಳಗ್ಗೆ ಸ್ಪೀಕರ್ ಕರು ಜಯಸೂರಿಯರತ್ತ ಧಾವಿಸಿದ ಬಳಿಕ ಅಧಿವೇಶನವನ್ನು ರದ್ದುಪಡಿಸಲಾಯಿತು.

ಈ ಸಂದರ್ಭದಲ್ಲಿ ಪದಚ್ಯುತ ಪ್ರಧಾನಿ ರನಿಲ್ ವಿಕ್ರಮೆಸಿಂೆಯ ಬೆಂಬಲಿಗರು ಸ್ಪೀಕರ್ ರಕ್ಷಣೆಗೆ ಧಾವಿಸಿದರು.

ವಿಕ್ರಮೆಸಿಂೆಯ ಯುನೈಟೆಡ್ ನ್ಯಾಶನಲ್ ಪಾರ್ಟಿಯ ಸದಸ್ಯರ ಪಲಿಟ ತೆವರಪ್ಪೆರುಮ ದೊಡ್ಡ ಚೂರಿಯನ್ನು ಹಿಡಿದಿರುವುದು ಕಂಡುಬಂತು.

ಬಿಳಿ ಬಟ್ಟೆಗಳನ್ನು ಧರಿಸಿದ ಸುಮಾರು 40 ಸಂಸದರು ಸಂಸತ್ತಿನಲ್ಲಿ ಹಲವು ನಿಮಿಷಗಳ ಕಾಲ ಪರಸ್ಪರರನ್ನು ದೂಡಿದರು ಹಾಗೂ ಹೊಯ್‌ಕೈ ನಡೆಸಿದರು.

ಕೆಲವರು ಮುಷ್ಟಿ ಕಾಳಗ ನಡೆಸಿದರು. ಓರ್ವ ಸಂಸದ ಕಸದ ಬುಟ್ಟಿಯೊಂದನ್ನು ಸ್ಪೀಕರ್‌ರತ್ತ ಎಸೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News