ಪ್ರತಿಷ್ಠಿತ ಡಿಎಸ್‌ಸಿ ಬಹುಮಾನ: ಜಯಂತ ಕಾಯ್ಕಿಣಿ ಸೇರಿ ಸ್ಪರ್ಧೆಯಲ್ಲಿ ನಾಲ್ವರು ಭಾರತೀಯರು

Update: 2018-11-15 18:01 GMT

ಲಂಡನ್,ನ.15: ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿರುವ 25,000 ಅ.ಡಾ.ಗಳ ಈ ವರ್ಷದ ಡಿಎಸ್‌ಸಿ ಬಹುಮಾನಕ್ಕಾಗಿ ಭಾರತೀಯ ಲೇಖಕರಾದ ಜಯಂತ್ ಕಾಯ್ಕಿಣಿ,ನೀಲ್ ಮುಖರ್ಜಿ,ಸುಜಿತ್ ಸರಾಫ್ ಮತ್ತು ಮನು ಜೋಸೆಫ್ ಹಾಗೂ ಪಾಕಿಸ್ತಾನಿ ಮೂಲದ ಲೇಖಕರಾದ ಕಾಮಿಲ್ ಶಂಸಿ ಮತ್ತು ಮುಹ್ಸಿನ್ ಹಾಮಿದ್ ಅವರು ಸ್ಪರ್ಧೆಯಲ್ಲಿದ್ದಾರೆ.

ಆಯ್ಕೆ ಸಮಿತಿಯ ಅಧ್ಯಕ್ಷ ರುದ್ರಾಂಗ್ಷು ಮುಖರ್ಜಿ ಅವರು ಬುಧವಾರ ಸಂಜೆ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಆ್ಯಂಡ್ ಪಾಲಿಟಿಕಲ್ ಸೈನ್ಸ್‌ನಲ್ಲಿ ಈ ಕಿರುಪಟ್ಟಿಯನ್ನು ಪ್ರಕಟಿಸಿದರು.

ಅರುಂಧತಿ ರಾಯ್,ಜೀತ್ ಥಯಿಲ್,ಪೆರುಮಾಳ ಮುರುಗನ್ ಮತ್ತು ತಬಿಷ್ ಖೈರ್ ಅವರ ಕೃತಿಗಳೂ ಬಹುಮಾನವನ್ನು ಬಯಸಿದ್ದ ಉದ್ದನೆಯ ಪಟ್ಟಿಯಲ್ಲಿದ್ದವಾದರೂ ಶಾರ್ಟ್ ಲಿಸ್ಟ್ ಆಗುವಲ್ಲಿ ವಿಫಲಗೊಂಡಿವೆ.

ತೇಜಸ್ವಿನಿ ನಿರಂಜನ ಅವರು ಇಂಗ್ಲಿಷ್‌ಗೆ ಅನುವಾದಿಸಿರುವ ಕಾಯ್ಕಿಣಿಯವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕೃತಿಯು ಶಾರ್ಟಲಿಸ್ಟ್‌ನಲ್ಲಿದೆ. ಶಂಸಿಯವರ ‘ಹೋಮ್ ಫೈರ್‌‘,ಜೋಸೆಫ್ ಅವರ ‘ಮಿಸ್ ಲೈಲಾ ಆರ್ಮಡ್ ಆ್ಯಂಡ್ ಡೇಂಜರಸ್’,ಹಾಮಿದ್ ಅವರ ‘ಎಕ್ಸಿಟ್ ವೆಸ್ಟ್’,ಮುಖರ್ಜಿಯವರ ‘ಎ ಸ್ಟೇಟ್ ಆಫ್ ಫ್ರೀಡಂ’ ಮತ್ತು ಸರಾಫ್ ಅವರ ‘ಹರಿಲಾಲ್ ಆ್ಯಂಡ್ ಸನ್ಸ್’ ಶಾರ್ಟ್‌ಲಿಸ್ಟ್ ಆಗಿರುವ ಇತರ ಕೃತಿಗಳಾಗಿವೆ.

ಶಾರ್ಟ್‌ಲಿಸ್ಟ್ ಆಗಿರುವ ಕೃತಿಗಳು ಜಾಗತಿಕ ಆಸಕ್ತಿಯನ್ನು ಪ್ರತಿಫಲಿಸುತ್ತಿವೆ ಎಂದು ಸಂಘಟಕರು ತಿಳಿಸಿದ್ದಾರೆ. ಶಂಸಿ ಮತ್ತು ಮುಖರ್ಜಿ ಇಬ್ಬರೂ ಬ್ರಿಟನ್ ವಾಸಿಗಳಾದ್ದಾರೆ. ಹಾಮಿದ್ ಪಾಕಿಸ್ತಾನ್,ಅಮೆರಿಕ ಮತ್ತು ಬ್ರಿಟನ್‌ಗಳನ್ನು ತನ್ನ ವಾಸಸ್ಥಾನವಾಗಿ ಮಾಡಿಕೊಂಡಿದ್ದರೆ, ಸರಾಫ್ ಅಮೆರಿಕದಲ್ಲಿ ನೆಲೆಸಿದ್ದಾರೆ. ಕಾಯ್ಕಿಣಿ ಮತ್ತು ಜೋಸೆಫ್ ಭಾರತದಲ್ಲಿದ್ದಾರೆ.

 2019,ಜ.22ರಿಂದ 27ರವರೆಗೆ ಕೋಲ್ಕತಾದಲ್ಲಿ ನಡೆಯಲಿರುವ ಟಾಟಾ ಸ್ಟೀಲ್ ಕೋಲ್ಕತಾ ಸಾಹಿತ್ಯ ಸಮಾವೇಶದಲ್ಲಿ ಬಹುಮಾನ ವಿಜೇತರನ್ನು ಪ್ರಕಟಿಸಲಾಗುವುದು. ಈ ವರ್ಷದ ಬಹುಮಾನಕ್ಕಾಗಿ ಒಟ್ಟು 88 ಪ್ರವೇಶಗಳು ಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News