ನಿಸಾನ್ ಅಧ್ಯಕ್ಷ ಕಾರ್ಲೋಸ್ ಘೋಸನ್ ಬಂಧನ

Update: 2018-11-19 16:51 GMT

ಟೋಕಿಯೊ,ನ.19: ಹಣ ದುರುಪಯೋಗ ಮತ್ತು ಇತರ ಗಂಭೀರ ದುರ್ವರ್ತನೆಗಳ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಾರ್ಲೋಸ್ ಘೋಸನ್ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸುವುದಾಗಿ ಜಪಾನಿನ ಖ್ಯಾತ ವಾಹನ ತಯಾರಿಕೆ ಸಂಸ್ಥೆ ನಿಸಾನ್ ಮೋಟರ್ ಕಂಪನಿಯು ಸೋಮವಾರ ತಿಳಿಸಿದೆ.

 ಘೋಸನ್ ಮತ್ತು ಆಡಳಿತ ಮಂಡಳಿಯ ನಿರ್ದೇಶಕ ಗ್ರೆಗ್ ಕೆಲ್ಲಿ ಅವರ ಅವ್ಯವಹಾರಗಳ ಸುಳಿವು ದೊರೆತ ಬಳಿಕ ಹಲವಾರು ತಿಂಗಳುಗಳಿಂದ ತಾನು ತನಿಖೆ ನಡೆಸುತ್ತಿದ್ದೆ ಮತ್ತು ತನಿಖಾ ತಂಡಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದೇನೆ ಎಂದೂ ಹೇಳಿದೆ.

ಘೋಸನ್ ಮತ್ತು ಕೆಲ್ಲಿ ಹಲವಾರು ವರ್ಷಗಳಿಂದಲೂ ಟೋಕಿಯೊ ಶೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸುತ್ತಿದ್ದ ವರದಿಗಳಲ್ಲಿ ವಾಸ್ತವದಲ್ಲಿ ಪಡೆದುಕೊಳ್ಳುತ್ತಿದ್ದಕ್ಕಿಂತ ಕಡಿಮೆ ವೇತನವನ್ನು ತೋರಿಸುತ್ತಿದ್ದರು. ಘೋಸನ್ ಅವರ ಘೋಷಿತ ಆದಾಯ ಕಡಿಮೆಯಿರುವಂತೆ ನೋಡಿಕೊಳ್ಳುವುದು ಅವರ ಉದ್ದೇಶವಾಗಿತ್ತು ಎಂದು ನಿಸಾನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕಂಪನಿಯ ಸಿಇಒ ಹಿರೊಟೊ ಸಾಯಿಕಾವಾ ಅವರು ಘೋಸನ್ ಮತ್ತು ಕೆಲ್ಲಿ ಅವರನ್ನು ವಜಾಗೊಳಿಸುವ ಪ್ರಸ್ತಾವವನ್ನು ಆಡಳಿತ ಮಂಡಳಿಗೆ ಸಲ್ಲಿಸಲಿದ್ದಾರೆ. ತನ್ನ ವೇತನವನ್ನು ಕಡಿಮೆ ತೋರಿಸುತ್ತಿದ್ದಾರೆ ಎಂಬ ಶಂಕೆಯಿಂದ ಘೋಸನ್ ಅವರನ್ನು ಟೋಕಿಯೊ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಎಂದು ಯೊಮಿಯುರಿ ಪತ್ರಿಕೆಯು ವರದಿ ಮಾಡಿದೆ.

 ಈ ಸುದ್ದಿಯು ಜಪಾನಿನಲ್ಲಿ ಆಘಾತಕ್ಕೆ ಕಾರಣವಾಗಿದೆ. ದೇಶದ ವಾಹನ ತಯಾರಿಕೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಹೊಂದಿರುವ ಘೋಸನ್ ಅಪರೂಪದ ವಿದೇಶಿ ಹಿರಿಯ ಅಧಿಕಾರಿಯಾಗಿದ್ದು,ದಿವಾಳಿ ಹಂತದಲ್ಲಿದ್ದ ನಿಸಾನ್ ಕಂಪನಿಯನ್ನು ಲಾಭದಾಯಕ ಸಂಸ್ಥೆಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಅವರು ಫ್ರಾನ್ಸ್‌ನ ರೆನಾಲ್ಟ್ ಕಂಪನಿಯ ಅಧ್ಯಕ್ಷರೂ ಆಗಿದ್ದಾರೆ.

ಪೊಲೀಸರು ಸೋಮವಾರ ಸಂಜೆ ನಿಸಾನ್‌ನ ಕೇಂದ್ರ ಕಚೇರಿ ಮತ್ತು ಇತರ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News