ಯುವಕನನ್ನು 99 ವರ್ಷಗಳ ಜೈಲುಶಿಕ್ಷೆಯಿಂದ ಪಾರು ಮಾಡಿದ ಸೆಲ್ಫಿ!

Update: 2018-11-20 08:47 GMT

ಟೆಕ್ಸಾಸ್, ನ.20: ಸೆಲ್ಫಿ ಗೀಳು ಹಲವು ಮಂದಿಗೆ ಮಾರಣಾಂತಿಕವಾಗಿ ಪರಿಣಮಿಸಿದ ನಿದರ್ಶನಗಳಿವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಸೆಲ್ಫಿಯೊಂದು ಯುವಕನೊಬ್ಬನನ್ನು ಸಂಭಾವ್ಯ 99 ವರ್ಷಗಳ ಜೈಲುಶಿಕ್ಷೆಯಿಂದ ಪಾರು ಮಾಡಿ ಆತನ ಪಾಲಿಗೆ ಆಪತ್ಬಾಂಧವನಾಗಿದೆ.

ಸೆಂಟ್ರಲ್ ಟೆಕ್ಸಾಸ್ ನಿವಾಸಿ ಕ್ರಿಸ್ಟೋಫರ್ ಪ್ರಿಕೋಪಿಯಾ (21) ಎಂಬ ಯುವಕ ಜಾರ್ಜ್ ಟೌನ್‍ನಲ್ಲಿ ತನ್ನ ಉದ್ಯೋಗದಲ್ಲಿ ನಿರತನಾಗಿದ್ದ ವೇಳೆ ಸೆಪ್ಟೆಂಬರ್ 22, 2017ರಂದು ಪೊಲೀಸರು ಆತನನ್ನು ಬಂಧಿಸಿದಾಗ ಆತನ ಪಾಲಿಗೆ ಆಘಾತವಾಗಿತ್ತು.

ಮಾಜಿ ಗರ್ಲ್ ಫ್ರೆಂಡ್ ಆತನ ವಿರುದ್ಧ ದೂರು ನೀಡಿದ್ದೇ ಬಂಧನಕ್ಕೆ ಕಾರಣವಾಗಿತ್ತು. ಆತ ತನ್ನ ಮನೆಯೊಳಕ್ಕೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಆಕೆ ಆರೋಪಿಸಿದ್ದಳು. ಆತ ತಾನು ನಿರಪರಾಧಿ ಎಂದು ಹೇಳಿದರೂ ಯಾರೂ ಕೇಳುವವರಿರಲಿಲ್ಲ, ಆತ ಮತ್ತು  ದೂರುದಾರೆ ಹೈಸ್ಕೂಲ್ ದಿನಗಳಲ್ಲಿ ಡೇಟಿಂಗ್ ಮಾಡುವುದನ್ನು ಬಿಟ್ಟರೆ ನಂತರದ ವರ್ಷಗಳಲ್ಲಿ  ಅವರಿಬ್ಬರ ನಡುವೆ ಸಂಪರ್ಕವಿರಲಿಲ್ಲ ಎಂದು ಆತನ ವಕೀಲರು ವಾದಿಸಿದ್ದರು.

ಘಟನೆ ಸೆಪ್ಟೆಂಬರ್ 20, 2017ರಂದು  ಸಂಜೆ 7.20ರ ಸುಮಾರಿಗೆ  ನಡೆದಿದೆಯೆಂದು ಆರೋಪಿಸಲಾಗಿತ್ತು. ಆದರೆ ಆ ದಿನ, ಆ ಸಮಯ  ಕ್ರಿಸ್ಟೋಫರ್ ತನ್ನ ತಾಯಿ ಎರಿನ್ ಪ್ರಿಕೋಪಿಯಾ ಜತೆಗೆ ಆಸ್ಟಿನ್‍ನಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸುತ್ತಿದ್ದ ಎಂದು ತಾಯಿಗೆ ನೆನಪಾಗಿತ್ತು. ಅದೇ ದಿನ ರಾತ್ರಿ ಆ ಕಾರ್ಯಕ್ರಮದ ಸಂದರ್ಭ ತಾನು ತೆಗೆದಿದ್ದ ಸೆಲ್ಫಿಯನ್ನು ಎರಿನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.  ಆ ಸೆಲ್ಫಿಯ ಮೆಟಾಡಾಟಾ ಪರಿಶೀಲಿಸಿದಾಗ ಅದು 7:02 ಗಂಟೆಗೆ ತೆಗೆದಿದ್ದೆಂದು ಪೊಲೀಸರಿಗೆ ತಿಳಿದು ಬಂದಿತ್ತು. ಆದರೆ ಹಲ್ಲೆ ಘಟನೆ ನಡೆದಿದ್ದು ಬೆಲ್ ಕೌಂಟಿ ಹಾಗೂ ಅದು ಆ ಸಂದರ್ಭ ಕ್ರಿಸ್ಟೋಫರ್ ಇದ್ದ ಸ್ಥಳದಿಂದ 70 ಮೈಲಿಗಳಾಚೆಗಿತ್ತು.

ಈ  ಸೆಲ್ಫಿ ಸಾಕ್ಷ್ಯದ ಆಧಾರದಲ್ಲಿಯೇ ನ್ಯಾಯಾಲಯ ಕ್ರಿಸ್ಟೋಫರ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ. ಇದೀಗ ಆತನ ಕುಟುಂಬ ಆತನ ವಿರುದ್ಧ ಆರೋಪ ಹೊರಿಸಿದ ಯುವತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News