ಬುಧವಾರ ಮೊದಲ ಟ್ವೆಂಟಿ-20: ಭಾರತ-ಆಸ್ಟ್ರೇಲಿಯ ಹಣಾಹಣಿ

Update: 2018-11-20 18:07 GMT

ಬ್ರಿಸ್ಬೇನ್, ನ.20: ಆತಿಥೇಯ ಆಸ್ಟ್ರೇಲಿಯ ಹಾಗೂ ಭಾರತ ನಡುವಿನ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯ ಬುಧವಾರ ಇಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಫೇವರಿಟ್ ಆಗಿ ಗುರುತಿಸಿಕೊಂಡಿದ್ದು, ಆಸ್ಟ್ರೇಲಿಯ ವಿರುದ್ಧ ಈತನಕ ಆಡಿರುವ 15 ಪಂದ್ಯಗಳ ಪೈಕಿ 10ರಲ್ಲಿ ಜಯ ಸಾಧಿಸಿ ಉತ್ತಮ ಸಾಧನೆ ಮಾಡಿದೆ. ಆಸ್ಟ್ರೇಲಿಯ ನೆಲದಲ್ಲಿ ಆಡಿರುವ 6 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿದೆ.

ವಿಶ್ವದ ನಂ.2ನೇ ತಂಡವಾಗಿರುವ ಭಾರತ ಈ ವರ್ಷ ಆಡಿರುವ 16 ಟ್ವೆಂಟಿ-20 ಪಂದ್ಯಗಳ ಪೈಕಿ 13ರಲ್ಲಿ ಜಯ, ಕೇವಲ 3ರಲ್ಲಿ ಸೋಲುಂಡಿದೆ. ಪ್ರವಾಸಿ ಭಾರತ ತಂಡ 2017ರ ನವೆಂಬರ್‌ನ ಬಳಿಕ ಆಡಿರುವ ಏಳು ಟ್ವೆಂಟಿ-20 ಸರಣಿಗಳನ್ನು ಜಯಿಸಿದ್ದು, ಕಳೆದ ವರ್ಷದ ಜುಲೈನಲ್ಲಿ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಬಾರಿ ಸೋತಿತ್ತು.

ಡಿ.6 ರಿಂದ ಅಡಿಲೇಡ್‌ನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದ್ದು, ಅದಕ್ಕೂ ಮೊದಲು ನಡೆಯುವ ಟ್ವೆಂಟಿ-20 ಸರಣಿಯಲ್ಲಿ ಕೊಹ್ಲಿ ಪಡೆ ಪ್ರಾಬಲ್ಯ ಸಾಧಿಸುವ ವಿಶ್ವಾಸದಲ್ಲಿದೆ.

2016ರಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಕ್ಲೀನ್‌ಸ್ವೀಪ್ ಮಾಡಿತ್ತು. ಎರಡು ವರ್ಷಗಳ ಹಿಂದಿನ ಪ್ರದರ್ಶನವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿರುವ ಭಾರತ ಆ ಮೂಲಕ ಆಸ್ಟ್ರೇಲಿಯದ ಸುದೀರ್ಘ ಪ್ರವಾಸವನ್ನು ಆರಂಭಿಸುವ ವಿಶ್ವಾಸದಲ್ಲಿದೆ.

ಮತ್ತೊಂದೆಡೆ ಆಸ್ಟ್ರೇಲಿಯ ತಂಡ ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಯಲ್ಲಿ ಚೆಂಡು ವಿರೂಪ ವಿವಾದದಲ್ಲಿ ಸಿಲುಕಿದ ಬಳಿಕ ಕಳೆಗುಂದಿದೆ. ಇತ್ತೀಚೆಗೆ ಕ್ರಿಕೆಟ್ ಆಸ್ಟ್ರೇಲಿಯ, ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ವಿರುದ್ಧ ಚೆಂಡು ವಿರೂಪ ಪ್ರಕರಣದಲ್ಲಿ ವಿಧಿಸಲಾಗಿರುವ ನಿಷೇಧ ಅವಧಿ ಕಡಿಮೆಗೊಳಿಸಲು ನಿರಾಕರಿಸಿತ್ತು. ಸ್ಮಿತ್ ಹಾಗೂ ವಾರ್ನರ್ ಅನುಪಸ್ಥಿತಿಯು ಆಸ್ಟ್ರೇಲಿಯದ ಫಲಿತಾಂಶದ ಮೇಲೆ ಪರಿಣಾಮಬೀರುತ್ತಿದೆ. ಈ ಇಬ್ಬರು ನಿಷೇಧಕ್ಕೆ ಒಳಗಾದ ಬಳಿಕ ಮಾರ್ಚ್ ನಂತರ ಆಸ್ಟ್ರೇಲಿಯ ಆಡಿರುವ ಯಾವ ಟ್ವೆಂಟಿ-20 ಸರಣಿಯನ್ನೂ ಜಯಿಸಿಲ್ಲ.

ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿರುವ ಏಕೈಕ ಟ್ವೆಂಟಿ-20 ಪಂದ್ಯವನ್ನು ಸೋತಿತ್ತು. ಝಿಂಬಾಬ್ವೆಯಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಟಿ-20 ಸರಣಿ ಫೈನಲ್ ಪಂದ್ಯದಲ್ಲಿ ಸೋಲುಂಡಿತ್ತು. ಯುಎಇನಲ್ಲಿ ನಡೆದ ಪಾಕ್ ವಿರುದ್ಧದ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಮತ್ತೊಮ್ಮೆ ಸೋತಿತ್ತು. ಕಳೆದ ಶನಿವಾರ ನಡೆದ ಮಳೆಬಾಧಿತ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಕ್ಕೆ ಶರಣಾಗಿತ್ತು. ಈ ಮೂಲಕ ಸತತ 4ನೇ ಪಂದ್ಯವನ್ನು ಕಳೆದುಕೊಂಡಿತ್ತು.

ಸ್ವದೇಶದಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ಈ ಸರಣಿಯ ಮೂಲಕ ತಂಡಕ್ಕೆ ವಾಪಸಾಗುತ್ತಿದ್ದಾರೆ.

ಕೊಹ್ಲಿ ವಾಪಸಾತಿಯಿಂದ ಭಾರತ ತಂಡ ಬಲಿಷ್ಠವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದೀಗ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಕೊಹ್ಲಿ ವಿರುದ್ಧ ಆ್ಯರೊನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯ ಯಾವ ರೀತಿಯ ರಣತಂತ್ರ ರೂಪಿಸಿದೆ ಎಂದು ಕಾದುನೋಡಬೇಕಾಗಿದೆ. ಆಸ್ಟ್ರೇಲಿಯದಲ್ಲಿ ಕೊಹ್ಲಿ ಯಾವಾಗಲೂ ಗಮನಾರ್ಹ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. 2014ರಲ್ಲಿ ಮೊದಲ ಬಾರಿ ಆಸೀಸ್ ನೆಲದಲ್ಲಿ ಆಡಿದ್ದ ಕೊಹ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದರು. 2016ರಲ್ಲಿ ನಡೆದ ಟ್ವೆಂಟಿ-20 ಸರಣಿಯಲ್ಲಿ 3 ಇನಿಂಗ್ಸ್‌ಗಳಲ್ಲಿ ಒಟ್ಟು 199 ರನ್ ಗಳಿಸಿದ್ದ ಕೊಹ್ಲಿ ಆಸ್ಟ್ರೇಲಿಯಕ್ಕೆ ವೈಟ್‌ವಾಶ್ ಬಳಿದಿದ್ದರು.

ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ ನಾಯಕ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. 2018ರ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್‌ಗೆ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ನೀಡಲಾಗಿತ್ತು.

ಪ್ರಸ್ತುತ ರಾಹುಲ್ ಹಿಂದಿನ ಫಾರ್ಮ್‌ನಲ್ಲಿಲ್ಲ. ಇತ್ತೀಚೆಗೆ ಸ್ವದೇಶದಲ್ಲಿ ನಡೆದ ಟ್ವೆಂಟಿ-20 ಸರಣಿಯಲ್ಲಿ 16,ಔಟಾಗದೆ 26 ಹಾಗೂ 17 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಟೀಮ್ ಮ್ಯಾನೇಜ್‌ಮೆಂಟ್ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್‌ರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಈ ಇಬ್ಬರು ಇತ್ತೀಚೆಗೆ ಸ್ಥಿರ ಹಾಗೂ ಸ್ಫೋಟಕ ಪ್ರದರ್ಶನ ನೀಡುತ್ತಿದ್ದಾರೆ.

ದಿಲ್ಲಿ ಯುವ ದಾಂಡಿಗ ಪಂತ್ ಕೀಪಿಂಗ್ ಗ್ಲೌಸ್ ತೊಡುವ ಸಾಧ್ಯತೆಯಿದೆ. ಪಂತ್ ಅವರು ಕೋಚ್ ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ಪ್ರಾಕ್ಟೀಸ್ ನಡೆಸಿದ್ದಾರೆ. ಕಾರ್ತಿಕ್ ಕೀಪಿಂಗ್ ಅಭ್ಯಾಸದಿಂದ ದೂರ ಉಳಿದಿದ್ದಾರೆ.

ಟೀಮ್ ಮ್ಯಾನೇಜ್‌ಮೆಂಟ್ ಟೆಸ್ಟ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ತಿಕ್‌ರನ್ನು ಕೈಬಿಟ್ಟು ರಾಹುಲ್‌ಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಬೌಲಿಂಗ್ ದಾಳಿಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಭಾರತಕ್ಕೆ ಚಿಂತೆಯ ವಿಷಯವಾಗಿ ಪರಿಣಮಿಸಿದೆ.

ಗಾಬಾ ಪಿಚ್ ವೇಗ ಹಾಗೂ ಬೌನ್ಸ್‌ನಿಂದ ಕೂಡಿರುವ ಕಾರಣ ಮೂವರು ವೇಗಿಗಳಾದ ಭುವನೇಶ್ವರ ಕುಮಾರ್, ಜಸ್‌ಪ್ರಿತ್ ಬುಮ್ರಾ ಹಾಗೂ ಖಲೀಲ್ ಅಹ್ಮದ್ ಅವಕಾಶ ಪಡೆಯುವುದು ನಿಶ್ಚಿತ.

ಕುಲ್‌ದೀಪ್ ಯಾದವ್ ಸ್ಪಿನ್ನರ್‌ಗಳ ಪೈಕಿ ಮೊದಲ ಆಯ್ಕೆಯಾಗಿದ್ದು, ಯಜುವೇಂದ್ರ ಚಹಾಲ್‌ಗೆ ಅವಕಾಶ ನೀಡುವ ಸಾಧ್ಯತೆಯಿಲ್ಲ.

ವೆಸ್ಟ್‌ಇಂಡೀಸ್ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಕೃನಾಲ್ ಪಾಂಡ್ಯ ಉತ್ತಮ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ. ಟೀಮ್ ಮ್ಯಾನೇಜ್‌ಮೆಂಟ್ ಇಬ್ಬರು ಎಡಗೈ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವುದೇ ಎಂದು ಕಾದುನೋಡಬೇಕಾಗಿದೆ.

ದಕ್ಷಿಣ ಆಫ್ರಿಕ ವಿರುದ್ಧ ಶನಿವಾರ ವೇಗದ ಬೌಲರ್‌ಗಳಿಗೆ ಮಣೆ ಹಾಕಿದ್ದ ಆಸ್ಟ್ರೇಲಿಯ ಬುಧವಾರದ ಪಂದ್ಯದಲ್ಲಿ ಸ್ಪಿನ್ನರ್‌ರನ್ನು ಕಣಕ್ಕಿಳಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News