ಆಸ್ಟ್ರೇಲಿಯ ಫುಟ್ಬಾಲ್ ಆಟಗಾರ ಟಿಮ್ ಕಾಹಿಲ್ ವಿದಾಯ

Update: 2018-11-20 18:08 GMT

ಸಿಡ್ನಿ, ನ.20: ಆಸ್ಟ್ರೇಲಿಯದ ಹಿರಿಯ ಫುಟ್ಬಾಲ್ ಆಟಗಾರ ಟಿಮ್ ಕಾಹಿಲ್ ಮಂಗಳವಾರ ತನ್ನ ದೇಶದ ಪರ 108ನೇ ಹಾಗೂ ಕೊನೆಯ ಪಂದ್ಯವನ್ನಾಡುವ ಮೂಲಕ ಭಾವನಾತ್ಮಕ ವಿದಾಯ ಹೇಳಿದರು.

ಮಂಗಳವಾರ ಲೆಬನಾನ್ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯ 3-0 ಅಂತರದಿಂದ ಜಯ ಸಾಧಿಸಿತು. ಆಸ್ಟ್ರೇಲಿಯದ ಪರ ಒಟ್ಟು 50 ಗೋಲುಗಳನ್ನು ಬಾರಿಸಿ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಎನಿಸಿಕೊಂಡಿರುವ ಕಾಹಿಲ್ ಲೆಬನಾನ್ ವಿರುದ್ಧ ಕೊನೆಯ 9 ನಿಮಿಷಗಳ ಪಂದ್ಯವನ್ನು ಆಡಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಆಸ್ಟ್ರೇಲಿಯದ ಶ್ರೇಷ್ಠ ಫುಟ್ಬಾಲಿಗ ಕಾಹಿಲ್ ಕೊನೆಯ ಪಂದ್ಯದಲ್ಲಿ ಗೋಲು ಬಾರಿಸದಿದ್ದರೂ ನೆರೆದಿದ್ದ ಫುಟ್ಬಾಲ್ ಅಭಿಮಾನಿಗಳು ಎದ್ದುನಿಂತು ಗೌರವ ನೀಡಿದರು. ಕಾಹಿಲ್‌ಗೆ ನಾಯಕನ ಕಪ್ಪುಪಟ್ಟಿಯನ್ನು ನೀಡಲಾಯಿತು.

‘‘ನಾನು ಇದೇ ಮೊದಲ ಬಾರಿ ಫುಟ್ಬಾಲ್ ಅಂಗಣದಲ್ಲಿ ಅತ್ತಿದ್ದೇನೆ. ನನ್ನ ದೇಶದ ಪರ ಇಷ್ಟು ವರ್ಷ ಆಡಿದ್ದಕ್ಕೆ ಹೆಮ್ಮೆಯಾಗುತ್ತಿದೆ. ನಾನು ಆಸ್ಟ್ರೇಲಿಯ ಜೆರ್ಸಿ ಧರಿಸಿದಾಗ ಹೃದಯತುಂಬಿ ಆಡಿದ್ದೆ. ನನ್ನ ಸಹ ಆಟಗಾರರು ಹಾಗೂ ಸಿಬ್ಬಂದಿಗಳ ಬೆಂಬಲವಿಲ್ಲದೆ ನನಗೆ ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ’’ ಎಂದು 38ರ ಹರೆಯದ ಕಾಹಿಲ್ ಹೇಳಿದ್ದಾರೆ.

ಸಿಡ್ನಿಯಲ್ಲಿ 1979ರಲ್ಲಿ ಜನಿಸಿರುವ ಕಾಹಿಲ್ ಅಂಡರ್-20 ತಂಡದಲ್ಲಿ ವೆಸ್ಟರ್ನ್ ಸಮೊವಾ ಪರ ಆಡುವ ಮೂಲಕ ವೃತ್ತಿಬದುಕು ಆರಂಭಿಸಿದರು. 2004ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸೌಹಾರ್ದ ಪಂದ್ಯದಲ್ಲಿ ಆಡುವುದರೊಂದಿಗೆ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ಗೆ ಕಾಲಿಟ್ಟರು. 2006ರಲ್ಲಿ ಜರ್ಮನಿಯಲ್ಲಿ ನಡೆದಿದ್ದ ಫುಟ್ಬಾಲ್ ವಿಶ್ವಕಪ್‌ನಲ್ಲಿ ಆಸೀಸ್ ಪರ ಗೋಲು ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದ ಕಾಹಿಲ್ 2010 ಹಾಗೂ 2014ರ ವಿಶ್ವಕಪ್‌ನಲ್ಲೂ ಗೋಲು ಬಾರಿಸಿದರು. ವಿಶ್ವಕಪ್‌ನಲ್ಲಿ ಒಟ್ಟು 5 ಗೋಲುಗಳನ್ನು ಬಾರಿಸಿದ ಆಸ್ಟ್ರೇಲಿಯದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಹೆಡರ್‌ನ ಮೂಲಕವೇ ಹೆಚ್ಚು ಗೋಲುಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News