ಸಿದ್ಧಾರ್ಥ್ ಶತಕ: ಕರ್ನಾಟಕ 263/4

Update: 2018-11-20 18:10 GMT

ಬೆಳಗಾವಿ, ನ.20: ಮಧ್ಯಮ ಕ್ರಮಾಂಕದ ದಾಂಡಿಗ ಕೆ.ವಿ. ಸಿದ್ಧಾರ್ಥ್ ದಾಖಲಿಸಿದ ಶತಕ(ಔಟಾಗದೆ 104,184 ಎಸೆತ) ಹಾಗೂ ಕೆ.ಅಬ್ಬಾಸ್ ಅರ್ಧಶತಕ(64, 154 ಎಸೆತ)ಕೊಡುಗೆ ನೆರವಿನಿಂದ ಕರ್ನಾಟಕ ತಂಡ ಮುಂಬೈ ವಿರುದ್ಧ ರಣಜಿ ಟ್ರೋಫಿ ಪಂದ್ಯದ ಮೊದಲ ದಿನ ಗೌರವಾರ್ಹ ಮೊತ್ತ ದಾಖಲಿಸಿದೆ.

ಮಂಗಳವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಜಯಿಸಿದ ಕರ್ನಾಟಕ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. 88 ಓವರ್‌ಗಳಲ್ಲಿ 4 ವಿಕೆಟ್‌ಗೆ 263 ರನ್ ಗಳಿಸಿದೆ.

27ನೇ ಓವರ್‌ನಲ್ಲಿ ಆರಂಭಿಕ ಆಟಗಾರರಾದ ಭವಾನೆ(5) ಹಾಗೂ ನಿಶ್ಚಲ್(27) ವಿಕೆಟ್‌ಗಳನ್ನು ಕಳೆದುಕೊಂಡ ಕರ್ನಾಟಕ ಕಳಪೆ ಆರಂಭ ಪಡೆಯಿತು. ಶಿವಂ ದುಬೆ ಈ ಇಬ್ಬರು ಆಟಗಾರರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿದರು.

ಮೂರನೇ ವಿಕೆಟ್‌ಗೆ 104 ರನ್ ಜೊತೆಯಾಟ ನಡೆಸಿದ ಕೆ.ಅಬ್ಬಾಸ್(64,154 ಎಸೆತ, 10 ಬೌಂಡರಿ) ಹಾಗೂ ಕೆವಿ ಸಿದ್ದಾರ್ಥ್(ಅಜೇಯ 104,184 ಎಸೆತ, 13 ಬೌಂಡರಿ, 2 ಸಿಕ್ಸರ್)ತಂಡವನ್ನು ಆಧರಿಸಿದರು. ಅಬ್ಬಾಸ್ ವಿಕೆಟನ್ನು ಉರುಳಿಸಿದ ದುಬೆ ಈ ಜೋಡಿಯನ್ನು ಬೇರ್ಪಡಿಸಿದರು.

ಅಬ್ಬಾಸ್ ಔಟಾದ ಬಳಿಕ ಬಂದ ಸ್ಟುವರ್ಟ್ ಬಿನ್ನಿ 12 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ದುಬೆ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.

ಐದನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 88 ರನ್ ಸೇರಿಸಿದ ಸಿದ್ಧಾರ್ಥ್ ಹಾಗೂ ಶ್ರೇಯಸ್ ಗೋಪಾಲ್(ಔಟಾಗದೆ 47, 87 ಎಸೆತ, 8 ಬೌಂಡರಿ)ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಲು ಪ್ರಯತ್ನಿಸುತ್ತಿದ್ದಾರೆ.

ಮುಂಬೈ ಪರ ಮಧ್ಯಮ ವೇಗದ ಬೌಲರ್ ಶಿವಂ ದುಬೆ 32 ರನ್‌ಗೆ 4 ವಿಕೆಟ್ ಪೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

►ಕರ್ನಾಟಕ 88 ಓವರ್‌ಗಳಲ್ಲಿ 263/4

(ಸಿದ್ದಾರ್ಥ್ ಔಟಾಗದೆ 104, ಕೆ.ಅಬ್ಬಾಸ್ 64, ಎಸ್.ಗೋಪಾಲ್ ಔಟಾಗದೆ 47, ನಿಶ್ಚಲ್ 27, ಶಿವಂ ದುಬೆ 4-32)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News