ರಣಜಿ ಟ್ರೋಫಿ: ಕರ್ನಾಟಕ 400 ರನ್‌ಗೆ ಆಲೌಟ್

Update: 2018-11-21 18:21 GMT

ಬೆಳಗಾವಿ, ನ.21: ಮಧ್ಯಮ ಕ್ರಮಾಂಕದ ದಾಂಡಿಗ ಕೆವಿ ಸಿದ್ದಾರ್ಥ್(161) ಭರ್ಜರಿ ಶತಕದ ನೆರವಿನಿಂದ ಕರ್ನಾಟಕ ತಂಡ ಮುಂಬೈ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 400 ರನ್ ಗಳಿಸಿ ಆಲೌಟಾಗಿದೆ.

ಕರ್ನಾಟಕದ ಮೊದಲ ಇನಿಂಗ್ಸ್‌ಗೆ ಉತ್ತರಿಸಹೊರಟಿರುವ ಮುಂಬೈ ತಂಡ 2ನೇ ದಿನದಾಟದಂತ್ಯಕ್ಕೆ 36.5 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 99 ರನ್ ಗಳಿಸಿದೆ. ಆರಂಭಿಕ ಆಟಗಾರ ಬಿಶ್ತ್(ಔಟಾಗದೆ 69, 111 ಎಸೆತ, 11 ಬೌಂಡರಿ)ಕ್ರೀಸ್ ಕಾಯ್ದುಕೊಂಡಿದ್ದಾರೆ. ಹೆರ್ವಾಡ್ಕರ್(5) ಹಾಗೂ ಸರ್‌ದೇಸಾಯಿ(23) ವಿಕೆಟ್ ಒಪ್ಪಿಸಿದ್ದಾರೆ. ಅಭಿಮನ್ಯು ಮಿಥುನ್(1-22) ಹಾಗೂ ಮೋರೆ(1-22) ತಲಾ ಒಂದು ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 263 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ ಎಸ್.ಗೋಪಾಲ್(48) ವಿಕೆಟನ್ನು ಬೇಗನೆ ಕಳೆದುಕೊಂಡಿತು. 47 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಗೋಪಾಲ್ ನಿನ್ನೆಯ ಮೊತ್ತಕ್ಕೆ ಕೇವಲ 1 ರನ್ ಸೇರಿಸಿ ಧವಳ್ ಕುಲಕರ್ಣಿಗೆ ವಿಕೆಟ್ ಒಪ್ಪಿಸಿದರು.

ವಿಕೆಟ್ ಕೀಪರ್ ಬಿಆರ್ ಶರತ್(0)ಖಾತೆ ತೆರೆಯಲು ವಿಫಲರಾದರು. ಕೆಳಕ್ರಮಾಂಕದಲ್ಲಿ ಜೆ.ಸುಚಿತ್(30) ಹಾಗೂ ಅಭಿಮನ್ಯು ಮಿಥುನ್(ಔಟಾಗದೆ 34)ಎರಡಂಕೆಯ ಸ್ಕೋರ್ ಗಳಿಸಿದರು. 299 ಎಸೆತಗಳಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ ಶತಕವೀರ ಸಿದ್ದಾರ್ಥ್ 161 ರನ್ ಗಳಿಸಿ ದುಬೆ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.

 ಮುಂಬೈ ಪರ ಶಿವಂ ದುಬೆ 53 ರನ್‌ಗೆ 7 ವಿಕೆಟ್‌ಗಳನ್ನು ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಧವಳ್ ಕುಲಕರ್ಣಿ 54 ರನ್‌ಗೆ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News