ಇಂಗ್ಲೆಂಡ್ ವಿರುದ್ಧ ಸೇಡಿಗೆ ಭಾರತ ಸಿದ್ಧತೆ

Update: 2018-11-21 18:26 GMT

ನಾರ್ತ್ ಸೌಂಡ್(ಆ್ಯಂಟಿಗುವಾ), ನ.21: ಕಳೆದ ವರ್ಷ ವಿಶ್ವಕಪ್ ಫೈನಲ್‌ನಲ್ಲಿನ ಆಘಾತಕಾರಿ ಸೋಲನ್ನು ಮರೆಯಲು ಬಯಸಿರುವ ಭಾರತದ ಮಹಿಳಾ ತಂಡ ಶುಕ್ರವಾರ ಬೆಳಗ್ಗೆ ಇಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

  ಭಾರತ ತಂಡ ಅತ್ಯಂತ ಪೈಪೋಟಿಯಿಂದ ಕೂಡಿದ್ದ 50 ಓವರ್ ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ದ 9 ರನ್‌ನಿಂಂದ ಸೋತು ಪ್ರಶಸ್ತಿ ವಂಚಿತವಾಗಿತ್ತು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

 ಪ್ರಸ್ತುತ ಟ್ವೆಂಟಿ-20 ವಿಶ್ವಕಪ್‌ನ ಲೀಗ್ ಹಂತದಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿರುವ ಭಾರತ ಎರಡು ಬಲಿಷ್ಠ ತಂಡಗಳಾದ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯ ತಂಡವನ್ನು ಕ್ರಮವಾಗಿ 34 ಹಾಗೂ 48 ರನ್‌ಗಳ ಅಂತರದಿಂದ ಮಣಿಸಿತ್ತು.. ಹಾಲಿ ಏಕದಿನ ಚಾಂಪಿಯನ್ ಇಂಗ್ಲೆಂಡ್ ತಂಡ ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಅಪಾಯಕಾರಿ ತಂಡವಾಗಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಪ್ರದರ್ಶನ ಭಾರತದ ಯಶಸ್ಸಿಗೆ ಮುಖ್ಯ ಕಾರಣವಾಗಿದೆ. ಪಂಜಾಬ್ ಆಟಗಾರ್ತಿ ಕೌರ್ ಹಲವು ಬಾರಿ ತಂಡಕ್ಕೆ ಗೆಲುವು ತಂದಿದ್ದಾರೆ.

ಪ್ರಸ್ತುತ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಎರಡು ಗ್ರೂಪ್ ಪಂದ್ಯದಲ್ಲಿ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದರು. ನ್ಯೂಝಿಲೆಂಡ್ ವಿರುದ್ಧ ಶತಕ ಸಿಡಿಸಿದ್ದ ಕೌರ್ ಆಸ್ಟ್ರೇಲಿಯ ವಿರುದ್ಧ ಮಿಂಚಿನ ವೇಗದಲ್ಲಿ 43 ರನ್ ಗಳಿಸಿದ್ದರು. ಇದೀಗ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಒಟ್ಟು 167 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಸ್ಮತಿ ಮಂಧಾನ(144 ರನ್)ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಭಾರತದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಸೆಮಿ ಫೈನಲ್ ಪಂದ್ಯಕ್ಕೆ ವಾಪಸಾಗುತ್ತಿದ್ದಾರೆ. ಸ್ಪಿನ್ನರ್ ಅನುಜಾ ಪಾಟೀಲ್ ಅವರು ರಾಜ್‌ಗೆ ಸ್ಥಾನ ತೆರವುಗೊಳಿಸಬೇಕಾಗಿದೆ.

<ನೂತನ ಕೋಚ್ ರಮೇಶ್ ಪೊವಾರ್ ಮಾರ್ಗದರ್ಶನದಲ್ಲಿ ಏಕೈಕ ವೇಗಿ ಹಾಗೂ ಸ್ಪಿನ್ನರ್‌ಗಳೊಂದಿಗೆ ಆಡಿರುವ ಭಾರತದ ತಂತ್ರ ಫಲ ನೀಡಿದೆ. ಲೆಗ್ ಸ್ಪಿನ್ನರ್ ಪೂನಂ ಯಾದವ್(8 ವಿಕೆಟ್), ಎಡಗೈ ಸ್ಪಿನ್ನರ್ ರಾಧಾ ಯಾದವ್(7 ವಿಕೆಟ್) ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ಆಫ್-ಸ್ಪಿನ್ನರ್ ದೀಪ್ತಿ ಶರ್ಮಾ(4 ವಿಕೆಟ್) ಹಾಗೂ ದಯಾಲನ್ ಹೇಮಲತಾ(5 ವಿಕೆಟ್)ಬಿಗಿ ಬೌಲಿಂಗ್ ಮಾಡುತ್ತಿದ್ದಾರೆ. ಭಾರತದ ವೇಗಿಗಳಾದ ದೀಪ್ತಿ ಶರ್ಮಾ(10 ಓವರ್) ಹಾಗೂ ಮನ್ಸಿ ಜೋಶಿ(3 ಓವರ್)4 ಲೀಗ್ ಪಂದ್ಯಗಳಲ್ಲಿ ಕೇವಲ 13 ಓವರ್ ಬೌಲಿಂಗ್ ಮಾಡಿದ್ದಾರೆ.

ಪಂದ್ಯದ ಸಮಯ: ಶುಕ್ರವಾರ ಬೆಳಗ್ಗೆ 5:30

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News