ಆಸ್ಟ್ರೇಲಿಯಕ್ಕೆ ತಿರುಗೇಟು ನೀಡಲು ಕೊಹ್ಲಿ ಪಡೆ ತಯಾರಿ

Update: 2018-11-22 18:10 GMT

ಮೆಲ್ಬೋರ್ನ್, ನ.22: ಮಳೆಯಿಂದಾಗಿ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಸೋಲು ಅನುಭವಿಸಿದ ಟೀಮ್ ಇಂಡಿಯಾ ಶುಕ್ರವಾರ ಆಸ್ಟ್ರೇಲಿಯ ವಿರುದ್ಧ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿನ ಪ್ರಯತ್ನ ನಡೆಸಲಿದೆ.

ಆಸ್ಟ್ರೇಲಿಯ ಡಿಎಲ್ ನಿಯಮದಂತೆ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಜಯ ಗಳಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತ ಸರಣಿಯನ್ನು ಗೆಲ್ಲಬೇಕಾದರೆ ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ಕಳೆದ ಪಂದ್ಯದಲ್ಲಿ ಆರಂಭಿಕ ದಾಂಡಿಗ ಶಿಖರ್ ಧವನ್ ಆಕರ್ಷಕ 76 ರನ್ (42ಎ, 10ಬೌ,2ಸಿ) ಗಳಿಸಿದ್ದರು.

ಇವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ(7) ಬೇಗನೇ ನಿರ್ಗಮಿಸಿದ್ದರು. ಲೋಕೇಶ್ ರಾಹುಲ್(13) ವಿಫಲರಾಗಿದ್ದರು. ರಾಹುಲ್ ಈ ವರ್ಷದ ಜುಲೈನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯದಲ್ಲಿ ಔಟಾಗದೆ 101 ರನ್ ಗಳಿಸಿದ್ದರು. ಆ ಬಳಿಕದ 6 ಪಂದ್ಯಗಳಲ್ಲಿ ಅವರ ಸ್ಕೋರ್ 30ರ ಗಡಿ ದಾಟಿಲ್ಲ. ಮನೀಷ್ ಪಾಂಡ್ಯರನ್ನು ಅಂತಿಮ 11ರ ಬಳಗದಿಂದ ಹೊರಗಿಟ್ಟು ರಾಹುಲ್‌ಗೆ ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶ ನೀಡಲಾಗಿತ್ತು. ಸ್ವತಃ ನಾಯಕ ಕೊಹ್ಲಿ ನಂ.4 ಕ್ರಮಾಂಕದಲ್ಲಿ ಆಡುವ ನಿರ್ಧಾರ ಕೈಗೊಂಡಿದ್ದರು. ಆದರೆ ರಾಹುಲ್ 12 ಎಸೆತಗಳಲ್ಲಿ 1 ಬೌಂಡರಿ ಒಳಗೊಂಡ 13 ರನ್ ಗಳಿಸಿದ್ದರು.ಕೊಹ್ಲಿ ಕೂಡಾ ಬ್ಯಾಟಿಂಗ್‌ನಲ್ಲಿ ಮಿಂಚಲಿಲ್ಲ. ಅವರು 8 ಎಸೆತಗಳಲ್ಲಿ 4 ರನ್ ಗಳಿಸಿದರು. ಕೊಹ್ಲಿ ಇನ್ನೂ 4 ರನ್ ಸೇರಿಸುತ್ತಿದ್ದರೆ ಭಾರತ ಗೆಲುವಿನ ದಡ ಸೇರುವ ಸಾಧ್ಯತೆ ಇತ್ತು.

ಧವನ್‌ರನ್ನು ಹೊರತುಪಡಿಸಿದರೆ ಗರಿಷ್ಠ ರನ್ ದಾಖಲಿಸಿದವರು ದಿನೇಶ್ ಕಾರ್ತಿಕ್ (30). ವಿಕೆಟ್ ಕೀಪರ್ ರಿಷಭ್ ಪಂತ್ 20 ರನ್‌ಗಳ ಕಾಣಿಕೆ ನೀಡಿದ್ದರು.

ಭಾರತದ ಬೌಲಿಂಗ್ ದಾಳಿ ದುರ್ಬಲವಾಗಿತ್ತು. ಕೃನಾಲ್ ಪಾಂಡ್ಯ 4 ಓವರ್‌ಗಳಲ್ಲಿ 55 ರನ್ ಬಿಟ್ಟುಕೊಟ್ಟಿದ್ದರು. ಅವರ ಬೌಲಿಂಗ್‌ನಲ್ಲಿ 6 ಸಿಕ್ಸರ್‌ಗಳು ಆಸ್ಟ್ರೇಲಿಯ ತಂಡದ ಖಾತೆಗೆ ಜಮೆ ಆಗಿತ್ತು. ಖಲೀಲ್ ಅಹ್ಮದ್ 3 ಓವರ್‌ಗಳಲ್ಲಿ 42 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಕುಲ್‌ದೀಪ್ 4 ಓವರ್‌ಗಳಲ್ಲಿ 34ಕ್ಕೆ 2 ವಿಕೆಟ್‌ಉಡಾಯಿಸಿದ್ದರು. ಜಸ್‌ಪ್ರೀತ್ ಬುಮ್ರಾ 21ಕ್ಕೆ 1 ವಿಕೆಟ್ , ಭುವನೇಶ್ವರ ಕುಮಾರ್ 3 ಓವರ್‌ಗಳಲ್ಲಿ 15 ರನ್ ನೀಡಿ ಕೈ ಸುಟ್ಟುಕೊಂಡಿದ್ದರು.

ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್‌ರನ್ನು ಎರಡನೇ ಪಂದ್ಯದಲ್ಲಿ ಕಣಕ್ಕಿಳಿಸುವ ನಿಟ್ಟಿನಲ್ಲಿ ನಾಯಕ ಕೊಹ್ಲಿ ಚಿಂತನೆ ನಡೆಸಿದ್ದಾರೆ. ಆಸ್ಟ್ರೇಲಿಯದ ದಾಂಡಿಗರ ಪೈಕಿ ಗ್ಲೆನ್ ಮ್ಯಾಕ್ಸ್ ವೆಲ್ 24 ಎಸೆತಗಳಲ್ಲಿ 4 ಸಿಕ್ಸರ್ ಒಳಗೊಂಡ 46 ರನ್, ಕ್ರಿಸ್ ಲಿನ್ 20 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಇರುವ 37 ರನ್, ಮಾರ್ಕಸ್ ಸ್ಟೋನಿಸ್ ಔಟಾಗದೆ 19 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 33 ರನ್, ನಾಯಕ ಆ್ಯರೊನ್ ಫಿಂಚ್ 24 ಎಸೆತಗಳಲ್ಲಿ 3ಬೌಂಡರಿ ಒಳಗೊಂಡ 27 ರನ್ ಜಮೆ ಮಾಡಿದ್ದರು. ಎರಡನೇ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಂಡು ಬಂದಿದೆ.

ಭಾರತ

►ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ರಿಷಭ್ ಪಂತ್, ಕೃನಾಲ್ ಪಾಂಡ್ಯ, ಯಜುವೇಂದ್ರ ಚಹಾಲ್, ಕುಲ್‌ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಉಮೇಶ್ ಯಾದವ್, ಖಲೀಲ್ ಅಹ್ಮದ್ ಮತ್ತು ವಾಶಿಂಗ್ಟನ್ ಸುಂದರ್.

►ಆಸ್ಟ್ರೇಲಿಯ

ಆ್ಯರೊನ್ ಫಿಂಚ್(ನಾಯಕ), ಆ್ಯಸ್ಟನ್ ಅಗರ್, ಜೇಸನ್ ಬೆಹ್ರೆನ್‌ಡಾರ್ಫ್ , ಅಲೆಕ್ಸ್ ಕರ್ರೆ , ನಥಾನ್ ಕೌಲ್ಟರ್ ನೀಲ್, ಕ್ರಿಸ್ ಲಿನ್, ಬೆನ್ ಮೆಕ್‌ಡರ್ಮೆಟ್, ಗ್ಲೆನ್ ಮ್ಯಾಕ್ಸ್‌ವೆಲ್, ಡಿ’ಅರ್ಕೆ ಶಾರ್ಟ್, ಬಿಲ್ಲಿ ಸ್ಟಾನ್‌ಲೆಕ್, ಮಾರ್ಕಸ್ ಸ್ಟೋನಿಸ್, ಆ್ಯಂಡ್ರೆ ಟೈ, ಆ್ಯಡಮ್ ಝಾಂಪ .

ಪಂದ್ಯದ ಸಮಯ

ಅಪರಾಹ್ನ

1:20 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News