ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಮೊಮಿನುಲ್ ಹಕ್
ಚಿತ್ತಗಾಂಗ್, ನ.22: ವೆಸ್ಟ್‌ಇಂಡೀಸ್ ವಿರುದ್ಧ ಗುರುವಾರ ಇಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಮೊಮಿನುಲ್ ಹಕ್ ಶತಕ ದಾಖಲಿಸಿದರೆ, ವಿಂಡೀಸ್ ಬೌಲರ್ ಎಸ್.ಗ್ಯಾಬ್ರಿಯಲ್ ಮೂರು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದರು.
ಮೊದಲ ದಿನದಾಟದಂತ್ಯಕ್ಕೆ ಬಾಂಗ್ಲಾದೇಶ 8 ವಿಕೆಟ್‌ಗಳ ನಷ್ಟಕ್ಕೆ 315 ರನ್ ಗಳಿಸಿದೆ. ಮೊಮಿನುಲ್ ಹಕ್ 167 ಎಸೆತಗಳಲ್ಲಿ 120 ರನ್ ಗಳಿಸಿದರು. 8ನೇ ಶತಕ ಸಿಡಿಸಿದ ಹಕ್ ಬಾಂಗ್ಲಾ ಪರ ಗರಿಷ್ಠ ಟೆಸ್ಟ್ ಶತಕ ಸಿಡಿಸಿರುವ ತಮೀಮ್ ಇಕ್ಬಾಲ್ ಅವರೊಂದಿಗೆ ದಾಖಲೆ ಹಂಚಿಕೊಂಡರು.
ಇದೇ ವೇಳೆ ಈ ವರ್ಷ ನಾಲ್ಕನೇ ಶತಕವನ್ನು ಸಿಡಿಸಿದ ಹಕ್ ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದರು. ಕ್ಯಾಲೆಂಡರ್ ವರ್ಷದಲ್ಲಿ ಕೇವಲ 7 ಪಂದ್ಯಗಳಲ್ಲಿ ಹಕ್ ಈ ಸಾಧನೆ ಮಾಡಿದ್ದರೆ, ವಿರಾಟ್ ಕೊಹ್ಲಿ 4 ಶತಕಗಳನ್ನು ಗಳಿಸಲು 10 ಪಂದ್ಯಗಳನ್ನು ಆಡಿದ್ದಾರೆ. 2018ರಲ್ಲಿ ಹಕ್ ಹಾಗೂ ಕೊಹ್ಲಿ ಹೊರತುಪಡಿಸಿ ಬ್ರೆಂಡನ್ ಟೇಲರ್, ಉಸ್ಮಾನ್ ಖ್ವಾಜಾ, ಕ್ರೆಗ್ ಬ್ರಾತ್‌ವೇಟ್, ಕುಶಾಲ್ ಮೆಂಡಿಸ್, ಏಡೆನ್ ಮರ್ಕರಮ್ ಹಾಗೂ ಜೋ ರೂಟ್ ಈ ವರ್ಷ ಗರಿಷ್ಠ ಶತಕ ಗಳಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟೆಸ್ಟ್ ಶತಕ ಗಳಿಸಿದವರ ಪೈಕಿ ಹಕ್ ಹಾಗೂ ಕೊಹ್ಲಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹಕ್ ವಿಂಡೀಸ್ ವಿರುದ್ದದ ಸರಣಿಯಲ್ಲಿ ಇನ್ನೊಂದು ಪಂದ್ಯ ಆಡಲಿದ್ದಾರೆ. ಕೊಹ್ಲಿ ಈ ವರ್ಷ ಆಸ್ಟ್ರೇಲಿಯ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. 10 ಬೌಂಡರಿ, 1 ಸಿಕ್ಸರ್ ಸಿಡಿಸಿದ ಹಕ್ ಚಿತ್ತಗಾಂಗ್‌ನ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ಸತತ 3ನೇ ಶತಕ ಸಿಡಿಸಿದರು. ಇಮ್ರುಲ್‌ರೊಂದಿಗೆ 2ನೇ ವಿಕೆಟ್‌ಗೆ 104 ರನ್ ಜೊತೆಯಾಟ ನಡೆಸಿದ್ದ ಮೊಮಿನುಲ್ ಅವರು ಮುಹಮ್ಮದ್ ಮಿಥುನ್‌ರೊಂದಿಗೆ 3ನೇ ವಿಕೆಟ್‌ಗೆ 48 ರನ್ ಸೇರಿಸಿದರು. ಎಡಗೈ ದಾಂಡಿಗ ಹಕ್ ಸತತ ಓವರ್‌ಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ಶತಕ ಪೂರೈಸಿದರು. ಟೀ ವಿರಾಮದ ಬಳಿಕ ಗ್ಯಾಬ್ರಿಯಲ್ ಅವರು ಹಕ್ ಇನಿಂಗ್ಸಗೆ ತೆರೆ ಎಳೆದರು. 69 ರನ್‌ಗೆ 4 ವಿಕೆಟ್ ಕಬಳಿಸಿದ ಗ್ಯಾಬ್ರಿಯಲ್ ಅವರು ಶಾಕಿಬ್ ಅಲ್ ಹಸನ್(34), ಮುಶ್ಫಿಕುರ್ರಹೀಂ(4) ಹಾಗೂ ಮಹ್ಮೂದುಲ್ಲಾ(3) ವಿಕೆಟ್‌ಗಳನ್ನು ಉರುಳಿಸಿದರು. ತೈಜುಲ್ ಇಸ್ಲಾಮ್(32) ಹಾಗೂ ಚೊಚ್ಚಲ ಪಂದ್ಯ ಆಡಿದ ನಯೀಮ್ ಹಸನ್(24)9ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 56 ರನ್ ಸೇರಿಸಿ ತಂಡದ ಸ್ಕೋರನ್ನು 300ರ ಗಡಿ ದಾಟಿಸಿದರು.