×
Ad

ಸೆನಾ, ಸಮೀರ್, ಕಶ್ಯಪ್ ಕ್ವಾರ್ಟರ್ ಫೈನಲ್‌ಗೆ

Update: 2018-11-22 23:51 IST

ಲಕ್ನೊ, ನ.22: ಹಾಲಿ ಚಾಂಪಿಯನ್ ಸಮೀರ್ ವರ್ಮಾ ಹಾಗೂ ಮಾಜಿ ಚಾಂಪಿಯನ್ ಸೈನಾ ನೆಹ್ವಾಲ್ ಹಾಗೂ ಪಾರುಪಲ್ಲಿ ಕಶ್ಯಪ್ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಇಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ ಅಮೊಲಿಕಾ ಸಿಂಗ್ ಸಿಸೋಡಿಯಾರನ್ನು 21-14, 21-9 ಗೇಮ್‌ಗಳ ಅಂತರದಿಂದ ಮಣಿಸಿದರು. ಲಕ್ನೋದಲ್ಲಿ ಮೂರು ಬಾರಿ ಚಾಂಪಿಯನ್ ಕಿರೀಟ ಧರಿಸಿರುವ ಸೈನಾ ಅಂತಿಮ-8ರ ಸುತ್ತಿನಲ್ಲಿ 8ನೇ ಶ್ರೇಯಾಂಕದ ಸಹ ಆಟಗಾರ್ತಿ ರಿತುಪರ್ಣ ದಾಸ್‌ರನ್ನು ಎದುರಿಸಲಿದ್ದಾರೆ. ದಾಸ್ ಏಕಪಕ್ಷೀಯವಾಗಿ ಸಾಗಿದ ಮತ್ತೊಂದು ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಶುೃತಿ ಮುಂಡಾಡಾರನ್ನು 21-11,21-15 ಅಂತರದಿಂದ ಸೋಲಿಸಿದರು. ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ 2012 ಹಾಗೂ 2015ರ ಚಾಂಪಿಯನ್ ಕಶ್ಯಪ್ ಮೊದಲ ಗೇಮ್ ಸೋಲಿನಿಂದ ಚೇತರಿಸಿಕೊಂಡು ಇಂಡೋನೇಶ್ಯದ ಫಿರ್ಮನ್ ಅಬ್ದುಲ್ ಖೊಲಿಕ್‌ರನ್ನು 9-21, 22-20, 21-8 ಅಂತರದಿಂದ ಮಣಿಸಿದರು. ಕಶ್ಯಪ್ ಕ್ವಾರ್ಟರ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಸಿಟ್ಟಿಖೊಮ್ ಥಮ್ಮಸಿನ್‌ರನ್ನು ಎದುರಿಸಲಿದ್ದಾರೆ.

ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಸಮೀರ್ ಚೀನಾದ ಝಾವೊ ಜುನ್‌ಪೆಂಗ್‌ರನ್ನು 22-20, 21-17 ಗೇಮ್‌ಗಳ ಅಂತರದಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಚೀನಾದ ಝೌ ಝೆಕ್ಯೂರನ್ನು ಎದುರಿಸಲಿದ್ದಾರೆ.

ನಾಲ್ಕನೇ ಶ್ರೇಯಾಂಕದ ಬಿ.ಸಾಯಿ ಪ್ರಣೀತ್ ಇಂಡೊನೇಶ್ಯಾದ ಶೆಸಾರ್ ಹಿರೇನ್ ರುಸ್ಟಾವಿಟೊರನ್ನು 21-12, 21-10 ಗೇಮ್‌ಗಳಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಚೀನಾದ ಲು ಗ್ವಾಂಗ್‌ಝು ಅವರನ್ನು ಎದುರಿಸಲಿದ್ದಾರೆ. ಗ್ವಾಂಗ್‌ಝು ಸಾರ್ಲೊರ್ಲಕ್ಸ್ ಚಾಂಪಿಯನ್ ಶುಭಂಕರ್ ಡೇ ಅವರನ್ನು 21-13, 21-10 ನೇರ ಗೇಮ್‌ಗಳಿಂದ ಮಣಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ನ ಮತ್ತೊಂದು ಪಂದ್ಯದಲ್ಲಿ ಭಾರತದ ಸಾಯಿ ಉತ್ತೇಜಿತಾ ರಾವ್ ಸಹ ಆಟಗಾರ್ತಿ ರೇಶ್ಮಾ ಕಾರ್ತಿಕ್‌ರನ್ನು 21-12, 21-15 ಅಂತರದಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಲಿ ಕ್ಸುರುಯ್ ಸವಾಲು ಎದುರಿಸಲಿದ್ದಾರೆ.

ಇದೇ ವೇಳೆ ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಸಹ ಆಟಗಾರರಾದ ಶಿವಂ ಶರ್ಮಾ ಹಾಗೂ ಪೂರ್ವಿಶಾ ರಾಮ್‌ರನ್ನು 12-21, 21-14, 21-15 ಅಂತರದಿಂದ ಮಣಿಸಿ ಅಂತಿಮ-8ರ ಹಂತ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News