ಭುವನೇಶ್ವರದ ಹೊಟೇಲ್ ಆಹಾರಕ್ಕೆ ಇಂಗ್ಲೆಂಡ್ ತಕರಾರು

Update: 2018-11-24 18:18 GMT

ಭುವನೇಶ್ವರ, ನ.24: ಇಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಗೆ ವಾರ ಬಾಕಿ ಇರುವಂತೆಯೇ ಹೊಟೇಲ್ ಆಹಾರದ ಬಗ್ಗೆ ತಕರಾರು ಎತ್ತಿರುವ ಇಂಗ್ಲೆಂಡ್ ತಂಡ, ತಾವು ಉಳಿದುಕೊಂಡಿರುವ ತಾರಾ ಹೋಟೆಲ್‌ನ ಆಹಾರ ಸ್ವೀಕರಿಸುವುದಿಲ್ಲ ಎಂದು ತಿಳಿಸಿರುವುದಾಗಿ ಹಾಕಿ ಇಂಡಿಯಾ ಮಾಹಿತಿ ನೀಡಿದೆ.

ತಮ್ಮ ಆಹಾರವನ್ನು ಸ್ವಯಂ ಸಿದ್ಧಪಡಿಸಿಕೊಳ್ಳುವುದಾಗಿ ಇಂಗ್ಲೆಂಡ್ ತಂಡ ತಿಳಿಸಿರುವ ಕಾರಣ, ನಾಲ್ಕೊ ಛಹಕ್ ರಸ್ತೆಯಲ್ಲಿರುವ ಸೈನಿಕ ಶಾಲೆಯ ಹೋಟೆಲ್‌ನಲ್ಲಿ ತಂಡಕ್ಕೆ ಪ್ರತ್ಯೇಕ ಅಡುಗೆ ಮನೆಯ ವ್ಯವಸ್ಥೆ ಮಾಡಲಾಗಿದೆ ಎಂದು ಹಾಕಿ ಇಂಡಿಯಾ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತಿಳಿಸಿದೆ. (ಇಂಗ್ಲಿಷ್ ಆಟಗಾರರು ತಾವು ಉಳಿದುಕೊಳ್ಳಲಿರುವ ಮೇಫೇರ್ ಹೋಟೆಲ್‌ನಲ್ಲಿ ಆಹಾರ ಸ್ವೀಕರಿಸಲು ನಿರಾಕರಿಸಿರುವುದು ಯಾಕೆಂದು ತಿಳಿಯದು.)ಇದೀಗ ಅವರು ಸೈನಿಕ ಶಾಲೆಯ ಹೋಟೆಲ್‌ನಲ್ಲಿ ವಿಶೇಷ ಅಡುಗೆಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಅಲ್ಲಿಗೆ ದಿನಕ್ಕೆ ಮೂರು ಬಾರಿ ಹೋಗಬೇಕಿರುವುದರಿಂದ ಹೆಚ್ಚುವರಿ ಭದ್ರತೆ ಒದಗಿಸುವಂತೆ ಕೋರಿದ್ದಾರೆ. ಅದರಂತೆ ಭದ್ರತೆ ಒದಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಸತ್ಯಜಿತ್ ಮೊಹಾಂತಿ ತಿಳಿಸಿದ್ದಾರೆ. ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ಇಂಗ್ಲೆಂಡ್ ತಂಡದ ಕೆಲವು ಆಟಗಾರರು ಇಲ್ಲಿನ ಸ್ಟಾರ್ ಹೋಟೆಲ್‌ನಲ್ಲಿ ಆಹಾರ ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಸಮಸ್ಯೆಯಾಗುತ್ತಿರುವ ಕುರಿತು ದೂರಿದ್ದರು ಎಂದು ಹೇಳಲಾಗುತ್ತಿದೆ.

ಮೇಫೇರ್ ಹೋಟೆಲ್‌ನಲ್ಲಿ ಅರ್ಜೆಂಟೀನಾ, ಇಂಗ್ಲೆಂಡ್ ಸೇರಿದಂತೆ ಐದು ತಂಡಗಳಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ. ತಮ್ಮ ಹೋಟೆಲ್‌ನಲ್ಲಿ ಆಹಾರ ಸೇವಿಸಲು ಇಂಗ್ಲೆಂಡ್ ಆಟಗಾರರು ನಿರಾಕರಿಸಿದ್ದು ಯಾಕೆಂದು ತಿಳಿದಿಲ್ಲ ಎಂದು ಹೋಟೆಲ್‌ನ ಆಡಳಿತ ವರ್ಗ ತಿಳಿಸಿದೆ. ನವೆಂಬರ್ 28ರಿಂದ ಡಿಸೆಂಬರ್ 16ರವರೆಗೆ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ 16 ದೇಶಗಳ ತಂಡಗಳು ಪಾಲ್ಗೊಳ್ಳಲಿದ್ದು ಈ ತಂಡಗಳಿಗೆ ಭುವನೇಶ್ವರದ 8 ಹೋಟೆಲ್‌ಗಳಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿದೆ. ಈ ಹೋಟೆಲ್‌ಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಅಡುಗೆ ಮನೆ ಹಾಗೂ ಸಿದ್ಧಪಡಿಸಿದ ಆಹಾರವನ್ನು ತಪಾಸಣೆ ನಡೆಸಬೇಕೆಂದು ಭುವನೇಶ್ವರ ಮಹಾನಗರಪಾಲಿಕೆ ಅಧಿಕಾರಿಗಳಿಗೆ ರಾಜ್ಯ ಸರಕಾರ ಸೂಚಿಸಿದೆ. ಒಡಿಶಾದ ಸಾಂಪ್ರದಾಯಿಕ ತಿನಿಸಿನ ಜೊತೆಗೆ ವೈವಿಧ್ಯಮಯ ಖಾದ್ಯಗಳನ್ನು ತಂಡಗಳಿಗೆ ಉಣಬಡಿಸಲಾಗುವುದು. ಜೊತೆಗೆ ತಂಡಕ್ಕೆ ಮನರಂಜನೆ ನೀಡಲು ಸಾಂಸ್ಕೃತಿಕ ಕಾರ್ಯಕ್ರಮ ಕೂಡಾ ಆಯೋಜಿಸಲಾಗಿದೆ ಎಂದು ಹೋಟೆಲ್‌ನ ಆಡಳಿತ ವರ್ಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News