ಫೈನಲ್‌ನಲ್ಲಿ ಮುಗ್ಗರಿಸಿದ ಸೈನಾ

Update: 2018-11-25 18:15 GMT

 ಲಕ್ನೋ, ನ.25: ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ವರ್ಲ್ಡ್ ಟೂರ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಸೈನಾ ನೆಹ್ವಾಲ್ ಶ್ರೇಷ್ಠ ಪ್ರದರ್ಶನ ನೀಡಲು ವಿಫಲರಾದರು. ರವಿವಾರ ಏಕಪಕ್ಷೀಯವಾಗಿ ಸಾಗಿದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೈನಾ ಅವರು ಚೀನಾದ ಯುವ ಆಟಗಾರ್ತಿ ಹ್ಯಾನ್ ಯು ವಿರುದ್ಧ 18-21, 8-21 ನೇರ ಗೇಮ್‌ಗಳ ಅಂತರದಿಂದ ಸೋತರು.

ಕೇವಲ 34 ನಿಮಿಷಗಳಲ್ಲಿ ತನ್ನ ಹೋರಾಟ ಕೊನೆಗೊಳಿಸಿದ ಸೈನಾ ಮತ್ತೊಮ್ಮೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್‌ನಲ್ಲಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಲಿ ಕ್ಸುರುಯ್‌ರನ್ನು ಸೋಲಿಸಿದ್ದ ಚೀನಾದ ಯುವ ಆಟಗಾರ್ತಿ ಹ್ಯಾನ್ ವಿರುದ್ಧ ಮೊದಲ ಗೇಮ್‌ನಲ್ಲಿ ಸೈನಾ 6-5 ಮುನ್ನಡೆಯಲ್ಲಿದ್ದರು. ಆದರೆ, ಹಲವು ತಪ್ಪಿನಿಂದಾಗಿ ಚೀನಾದ ಆಟಗಾರ್ತಿಗೆ ಒತ್ತಡ ಹೇರಲು ವಿಫಲರಾದರು.

ಸೈನಾ ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಕಂಚು ಜಯಿಸಿದ್ದರು. ಜನವರಿಯಲ್ಲಿ ನಡೆದಿದ್ದ ಇಂಡೋನೇಶ್ಯ ಓಪನ್ ಹಾಗೂ ಅಕ್ಟೋಬರ್‌ನಲ್ಲಿ ನಡೆದಿದ್ದ ಡೆನ್ಮಾರ್ಕ್ ಓಪನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಫೈನಲ್ ಹಣಾಹಣಿಯಲ್ಲಿ ಇಂಡೋನೇಶ್ಯಾದ ಎರಡನೇ ಶ್ರೇಯಾಂಕದ ಫಜರ್ ಅಲಫಿಯಾನ್ ಹಾಗೂ ಮುಹಮ್ಮದ್ ರಿಯಾನ್ ವಿರುದ್ಧ 11-21, 20-22 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News