3ನೇ ಟೆಸ್ಟ್: ಸೋಲಿನ ಭೀತಿಯಲ್ಲಿ ಶ್ರೀಲಂಕಾ

Update: 2018-11-25 18:18 GMT

ಕೊಲಂಬೊ, ನ.25: ಇಂಗ್ಲೆಂಡ್ ವಿರುದ್ಧ ಮೂರನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಶ್ರೀಲಂಕಾ ತಂಡ ಸೋಲಿನ ಭೀತಿ ಎದುರಿಸುತ್ತಿದೆ. ಟೆಸ್ಟ್‌ನ ಮೂರನೇ ದಿನವಾಗಿರುವ ರವಿವಾರ ಗೆಲುವಿಗೆ 2ನೇ ಇನಿಂಗ್ಸ್‌ನಲ್ಲಿ 327 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ 53 ರನ್ ಗಳಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿದೆ.

ದಿನದಾಟ ನಿಂತಾಗ ಲಂಕಾದ ಕುಸಾಲ್ ಮೆಂಡಿಸ್ ಔಟಾಗದೆ 15 ರನ್ ಮತ್ತು ಲಕ್ಷ್ಮಣನ್ ಸಂಡಕನ್ 1 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಈಗಾಗಲೇ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 0-2 ಅಂತರದಲ್ಲಿ ಆಂಗ್ಲರಿಗೆ ಒಪ್ಪಿಸಿರುವ ಆತಿಥೇಯ ಶ್ರೀಲಂಕಾ ತಂಡ ಕೊನೆಯ ಪಂದ್ಯದಲ್ಲಿ ಸೋಲು ತಪ್ಪಿಸಲು ಹೋರಾಟ ನಡೆಸಬೇಕಾಗಿದೆ.

 ಎರಡನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ಆಲ್‌ರೌಂಡರ್ ದಿಲ್ರುವಾನ್ ಪೆರೆರಾ (88ಕ್ಕೆ5) ದಾಳಿಗೆ ಸಿಲುಕಿ 14 ಓವರ್‌ಗಳಲ್ಲಿ 39ಕ್ಕೆ 4 ವಿಕೆಟ್‌ಗಳನ್ನು ಕೈ ಚೆಲ್ಲಿತು.ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ 89 ರನ್‌ಗಳ ಜೊತೆಯಾಟ ನಡೆಸಿ ತಂಡದ ಸ್ಕೋರ್‌ನ್ನು ಶತಕದ ಗಡಿ ದಾಟಿಸಿದರು. ಬಟ್ಲರ್ 27 ರನ್ ಗಳಿಸಿದ್ದಾಗ ಧನಂಜಯ್ ಡಿಸಿಲ್ವ ಅವರು ಎಲ್‌ಬಿಡಬ್ಲು ಬಲೆಗೆ ಬೀಳಿಸಲು ಯತ್ನಿಸಿದರು. ಆದರೆ ಬಟ್ಲರ್ ಪಾರಾದರು.

ಸ್ಟೋಕ್ಸ್ 42 ರನ್ ಗಳಿಸಿ ನಿರ್ಗಮಿಸುವುದರೊಂದಿಗೆ ಇಂಗ್ಲೆಂಡ್‌ನ ಐದನೇ ವಿಕೆಟ್ ಪತನಗೊಂಡಿತು. 128 ರನ್ ಗಳಿಸಿದ್ದ ಇಂಗ್ಲೆಂಡ್‌ನ ಖಾತೆಗೆ 6ನೇ ವಿಕೆಟ್‌ಗೆಬಟ್ಲರ್ ಮತ್ತು ಮೊಯಿನ್ ಅಲಿ ಜೊತೆಯಾಗಿ 40 ರನ್ ಸೇರಿಸಿದರು. ಬಟ್ಲರ್ ಅರ್ಧಶತಕ(64) ಗಳಿಸಿದರು.

 ಅಲಿ 22 ರನ್, ಆದಿಲ್ ರಶೀದ್ 24 ರನ್ ಮತ್ತು ಸ್ಟುವರ್ಟ್ ಬ್ರಾಡ್ 1 ರನ್ ಗಳಿಸಿ ಔಟಾದರು.ವಿಕೆಟ್ ಕೀಪರ್ ಫೋಕೆಸ್ 36 ರನ್ ಗಳಿಸಿ ಅಜೇಯರಾಗಿ ಉಳಿದರು. ಮೊದಲ ಇನಿಂಗ್ಸ್‌ನಲ್ಲಿ 96 ರನ್‌ಗಳ ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ 230 ರನ್ ಗಳಿಸಿದ್ದು, ಲಂಕಾದ ಗೆಲುವಿಗೆ 327 ರನ್‌ಗಳ ಸವಾಲು ವಿಧಿಸಿದೆ. 2ನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟದಲ್ಲಿ 53 ರನ್ ಗಳಿಸಿರುವ ಶ್ರೀಲಂಕಾ ತಂಡ ಗೆಲುವಿಗೆ ಇನ್ನೂ 274 ರನ್ ಗಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News