ಒಡಿಶಾ: ಹಾಕಿ ವಿಶ್ವಕಪ್‌ಗೆ ವರ್ಣರಂಜಿತ ಚಾಲನೆ
ಭುವನೇಶ್ವರ, ನ.27: ಹದಿನಾಲ್ಕನೇ ಆವೃತ್ತಿಯ ಪುರುಷರ ಹಾಕಿ ವಿಶ್ವಕಪ್ ಟೂರ್ನಿಗೆ ಒಡಿಶಾ ರಾಜಧಾನಿ ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಮಂಗಳವಾರ ವರ್ಣರಂಜಿತವಾಗಿ ಚಾಲನೆ ನೀಡಲಾಯಿತು.
ಎಂಟು ವರ್ಷಗಳ ಬಳಿಕ ವಿಶ್ವಕಪ್‌ನ ಆತಿಥ್ಯ ವಹಿಸಿರುವ ಭಾರತ 43 ವರ್ಷಗಳ ಬಳಿಕ ಪ್ರಶಸ್ತಿ ಜಯಿಸಲು ಎದುರು ನೋಡುತ್ತಿದೆ. ಭಾರತ ಬುಧವಾರ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ.
ಇದೇ ಮೊದಲ ಬಾರಿ ಹಾಕಿ ವಿಶ್ವಕಪ್ ಟೂರ್ನಿಯನ್ನು ಅದ್ದೂರಿಯಾಗಿ ಉದ್ಘಾಟಿಸ ಲಾಗಿದ್ದು 3 ಗಂಟೆಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರೂಕ್ ಖಾನ್, ಮಾಧುರಿ ದೀಕ್ಷಿತ್ ಹಾಗೂ ಸಂಗೀತ ನಿರ್ದೇಶಕ ಎಆರ್ ರಹ್ಮಾನ್ 10,000 ಪ್ರೇಕ್ಷಕರನ್ನು ರಂಜಿಸಿದರು. ಭುವಿ ಬಿರುಕುಬಿಟ್ಟು ಭೂಮಿ ತಾಯಿ ಮೇಲೆ ಬರುವ ದೃಶ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮಾಧುರಿ ಭೂಮಿ ತಾಯಿಯಾಗಿ ಕಾಣಿಸಿಕೊಂಡರು.
ಟೂರ್ನಿಯಲ್ಲಿ ಭಾಗವಹಿಸಲಿರುವ ಎಲ್ಲ 16 ಹಾಕಿ ತಂಡಗಳ ನಾಯಕರುಗಳನ್ನು ವೇದಿಕೆ ಮೇಲೆ ಇಂಗ್ಲೀಷ್ ವರ್ಣಮಾಲೆಯ ಪ್ರಕಾರ ಅದ್ದೂರಿ ಸ್ವಾಗತ ನೀಡಲಾಯಿತು.
ನ್ಯೂಝಿಲೆಂಡ್, ಹಾಲೆಂಡ್, ದಕ್ಷಿಣ ಆಫ್ರಿಕ, ಸ್ಪೇನ್ ಹಾಗೂ ಪಾಕಿಸ್ತಾನದ ತಂಡಗಳ ನಾಯಕರುಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ಕೊನೆಯಲ್ಲಿ ಭಾರತದ ನಾಯಕ ಮನ್‌ಪ್ರೀತ್ ಸಿಂಗ್ ವೇದಿಕೆಗೆ ಏರಿದಾಗ ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 2018ರ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ ಆರಂಭವಾಗಿದೆ ಎಂದು ಘೋಷಿಸಿದರು.
ನೀವೆಲ್ಲರೂ ಸಂತೋಷವಾಗಿರುವಿರಾ? ಎಂದು ಕಳಿಂಗ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಪ್ರಶ್ನಿಸಿದ ಸಿಎಂ ಪಟ್ನಾಯಕ್, 18 ದಿನಗಳ ಕಾಲ ನಡೆಯುವ ಹಾಕಿ ಉತ್ಸವಕ್ಕೆ ನೀವೆಲ್ಲರೂ ಎದುರು ನೋಡುತ್ತಿದ್ದೀರಿ. ಇಲ್ಲಿಗೆ ಬಂದಿರುವ ಎಲ್ಲರಿಗೂ ಧನ್ಯವಾದಗಳು. ಟೂರ್ನಿಯಲ್ಲಿ ಭಾಗವಹಿಸಲಿರುವ ಎಲ್ಲ 16 ಹಾಕಿ ತಂಡಗಳಿಗೂ ಸ್ವಾಗತ’’ ಎಂದು ಹೇಳಿದರು.
ಮುಖ್ಯಮಂತ್ರಿ ಪಟ್ನಾಯಕ್ ವೇದಿಕೆಯಲ್ಲಿದ್ದ ಎಲ್ಲ 16 ಹಾಕಿ ತಂಡಗಳ ನಾಯಕರ ಕೈಕುಲುಕಿದರು. ಬಳಿಕ ಅವರೊಂದಿಗೆ ಗುಂಪು ಚಿತ್ರ ತೆಗೆಸಿಕೊಂಡರು.
ಬಾನಂಗಳದಲ್ಲಿ ಸುಡುಮದ್ದು ಸಿಡಿಸುವ ಮೂಲಕವಿಶ್ವಕಪ್ ಟೂರ್ನಿಗೆ ಚಾಲನೆ ನೀಡ ಲಾಯಿತು,. ಎಆರ್ ರಹ್ಮಾನ್, ಶಾರೂಖ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು. ಹಾಕಿ ಕುರಿತು ಕಥಾ ಹಂದರವಿದ್ದ ತಾನು ನಟಿಸಿದ್ದ ಯಶಸ್ವಿ ಹಿಂದಿ ಚಿತ್ರ ‘ಚಕ್‌ದೇ ಇಂಡಿಯಾ’ದ 70 ನಿಮಿಷದ ಸಂಭಾಷಣೆ ಹರಿಯಬಿಟ್ಟ ಶಾರೂಕ್ ಖಾನ್ ಪ್ರೇಕ್ಷಕರನ್ನು ರಂಜಿಸಿದರು. ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಟ್ವಿಟರ್‌ನ ಮೂಲಕ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲ ತಂಡಗಳಿಗೆ ಶುಭಾಶಯ ಕೋರಿದರು. ಕ್ರೀಡಾ ಪ್ರೇಮಿಗಳಿಗೆ ಈ ಟೂರ್ನಿಯು ಮುದ ನೀಡುವ ವಿಶ್ವಾಸ ನನಗಿದೆ. ಇದು ಭಾರತದ ಅತ್ಯಂತ ಮುಖ್ಯವಾಗಿ ಒಡಿಶಾದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ’’ ಎಂದು ಟ್ವೀಟ್ ಮಾಡಿದರು.