ಯಾಸಿರ್ ಶಾಗೆ 14 ವಿಕೆಟ್: ಪಾಕಿಸ್ತಾನಕ್ಕೆ ಇನಿಂಗ್ಸ್ ಜಯ
ದುಬೈ, ನ.27: ಲೆಗ್-ಸ್ಪಿನ್ನರ್ ಯಾಸಿರ್ ಶಾ ಅವರ 14 ವಿಕೆಟ್ ಗೊಂಚಲುಗಳ ನೆರವಿನಿಂದ ಪಾಕಿಸ್ತಾನ ತಂಡ ಮಂಗಳವಾರ ನ್ಯೂಝಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 16 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯು 1-1 ರಿಂದ ಸಮಬಲವಾಗಿದೆ. ಮೂರನೇ ಪಂದ್ಯ ಅಬುಧಾಬಿಯಲ್ಲಿ ಸೋಮವಾರ ಆರಂಭವಾಗಲಿದೆ. ನ್ಯೂಝಿಲೆಂಡ್ ಮೊದಲ ಪಂದ್ಯವನ್ನು 4 ರನ್‌ನಿಂದ ರೋಚಕವಾಗಿ ಗೆದ್ದುಕೊಂಡಿತ್ತು.
ಜೀವಶ್ರೇಷ್ಠ ಬೌಲಿಂಗ್(8ಕ್ಕೆ41) ಬೆಂಬಲದಿಂದ ನ್ಯೂಝಿಲೆಂಡ್‌ನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 90 ರನ್‌ಗೆ ನಿಯಂತ್ರಿಸಿದ್ದ ಶಾ ಎರಡನೇ ಇನಿಂಗ್ಸ್ ನಲ್ಲಿ 143 ರನ್‌ಗೆ 6 ವಿಕೆಟ್‌ಗಳನ್ನು ಉಡಾಯಿಸಿದರು. ಈ ಮೂಲಕ ನ್ಯೂಝಿಲೆಂಡ್ ತಂಡವನ್ನು 2ನೇ ಇನಿಂಗ್ಸ್‌ನಲ್ಲಿ 312 ರನ್‌ಗೆ ಆಲೌಟ್ ಮಾಡಲು ನೆರವಾದರು. ಶಾಗೆ ವೇಗದ ಬೌಲರ್ ಹಸನ್ ಅಲಿ(46ಕ್ಕೆ3)ಉತ್ತಮ ಸಾಥ್ ನೀಡಿದರು.
ಪಂದ್ಯವೊಂದರಲ್ಲಿ ಎದುರಾಳಿ ತಂಡದ ಒಟ್ಟು 14 ವಿಕೆಟ್‌ಗಳನ್ನು ಉರುಳಿಸಿದ ಶಾ ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದ ಇಮ್ರಾನ್ ಖಾನ್ ದಾಖಲೆಯನ್ನು ಸರಿಗಟ್ಟಿದರು. ಖಾನ್ 1984ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 8 ಹಾಗೂ 2ನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದರು.
ಹ್ಯಾರಿಸ್ ಸೊಹೈಲ್ ಹಾಗೂ ಬಾಬರ್ ಆಝಮ್ ಶತಕಗಳ ಕೊಡುಗೆ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ 5 ವಿಕೆಟ್ ನಷ್ಟಕ್ಕೆ 418 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತ್ತು.
ಶಾ ಎರಡು ಪಂದ್ಯಗಳ ಸರಣಿಯಲ್ಲಿ ಒಟ್ಟು 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವೃತ್ತಿಜೀವನದಲ್ಲಿ 200 ವಿಕೆಟ್ ಪೂರೈಸಲು ಇನ್ನು 5 ವಿಕೆಟ್‌ಗಳ ಅಗತ್ಯವಿದೆ. ರಾಸ್ ಟೇಲರ್(82), ಹೆನ್ರಿ ನಿಕೊಲ್ಸ್(77) ಹಾಗೂ ಟಾಮ್ ಲಥಾಮ್(50)ಎರಡನೇ ಇನಿಂಗ್ಸ್‌ನಲ್ಲಿ ನ್ಯೂಝಿಲೆಂಡ್ ಪ್ರತಿರೋಧ ಒಡ್ಡಲು ನೆರವಾದರು.
ಫಾಲೋ-ಆನ್‌ಗೆ ಸಿಲುಕಿದ್ದ ನ್ಯೂಝಿಲೆಂಡ್ ಮೂರನೇ ದಿನವಾದ ಮಂಗಳವಾರ 2 ವಿಕೆಟ್ ನಷ್ಟಕ್ಕೆ 131 ರನ್‌ನಿಂದ ಬ್ಯಾಟಿಂಗ್ ಆರಂಭಿಸಿತು. ಲಥಾಮ್ ನಿನ್ನೆಯ ಮೊತ್ತಕ್ಕೆ 6 ರನ್ ಸೇರಿಸಿ 50 ರನ್‌ಗೆ ಔಟಾದರು. ಲಥಾಮ್‌ರೊಂದಿಗೆ 3ನೇ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿದ ಟೇಲರ್(82,128 ಎಸೆತ, 7 ಬೌಂಡರಿ,1ಸಿಕ್ಸರ್)54 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಭೋಜನ ವಿರಾಮಕ್ಕೆ ಅರ್ಧಗಂಟೆ ಬಾಕಿ ಇರುವಾಗ ಬಿಲಾಲ್ ಆಸಿಫ್‌ಗೆ ಟೇಲರ್ ವಿಕೆಟ್ ಒಪ್ಪಿಸಿದರು. ಲಂಚ್ ವಿರಾಮದ ಬಳಿಕ ಶಾ ಅವರು ವಾಟ್ಲಿಂಗ್(27) ವಿಕೆಟ್ ಉಡಾಯಿಸಿದರು. ಹಸನ್ ಅಲಿ ಸರಣಿಯಲ್ಲಿ ಮೂರನೇ ಬಾರಿ ಗ್ರಾಂಡ್‌ಹೋಮ್ ವಿಕೆಟ್ ಪಡೆದರು. ಐಶ್ ಸೋಧಿ ಅವರು ಶಾ ಎಸೆತವನ್ನು ಸ್ವೀಪ್ ಮಾಡಲು ಹೋಗಿ ಔಟಾದರು. ನೀಲ್ ವಾಗ್ನರ್(10)ಹಾಗೂ ಟ್ರೆಂಟ್ ಬೌಲ್ಟ್(0) ವಿಕೆಟ್‌ನ್ನು ಉರುಳಿಸಿದ ಶಾ ಕಿವೀಸ್ ಇನಿಂಗ್ಸ್ ಗೆ ತೆರೆ ಎಳೆದರು.
ಯಾಸಿರ್ ಶಾ ನಿರೀಕ್ಷೆಯಂತೆಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.