ಐಸಿಸಿ ಟ್ವೆಂಟಿ -20 ರ‍್ಯಾಂಕಿಂಗ್: ಮೂರನೇ ಸ್ಥಾನಕ್ಕೇರಿದ ಹರ್ಮನ್‌ಪ್ರೀತ್

Update: 2018-11-27 18:52 GMT

 ದುಬೈ, ನ.27: ಭಾರತದ ಮಹಿಳಾ ಟ್ವೆಂಟಿ-20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಐಸಿಸಿ ವನಿತೆಯರ ಟ್ವೆಂಟಿ-20 ರ‍್ಯಾಂಕಿಂಗ್ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇತ್ತೀಚೆಗೆ ವೆಸ್ಟ್‌ಇಂಡೀಸ್‌ನಲ್ಲಿ ಕೊನೆಗೊಂಡಿರುವ ಮಹಿಳೆಯರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದ ಕೌರ್ ಟೂರ್ನಿಯಲ್ಲಿ ಎರಡನೇ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಈ ಸಾಧನೆಯ ಹಿನ್ನೆಲೆಯಲ್ಲಿ ರ‍್ಯಾಂಕಿಂಗ್ನಲ್ಲಿ 3 ಸ್ಥಾನ ಭಡ್ತಿ ಪಡೆದು 3ನೇ ಸ್ಥಾನಕ್ಕೇರಿದ್ದಾರೆ. ಕೌರ್ ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಗಳಿಸಿದ್ದ 103 ರನ್ ಸೇರಿದಂತೆ ಒಟ್ಟು 183 ರನ್ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ಹಂತದಲ್ಲೇ ತನ್ನ ಅಭಿಯಾನ ಕೊನೆಗೊಳಿಸಿದ್ದ ಭಾರತ ತಂಡದ ಪೈಕಿ ಜೆಮಿಮಾ ರೊಡ್ರಿಗಸ್ 9 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 6ನೇ ಸ್ಥಾನಕ್ಕೇರಿದರು.ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನಾ ಏಳು ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ 10ನೇ ಸ್ಥಾನ ತಲುಪಿದ್ದಾರೆ.

10 ತಂಡಗಳು ಭಾಗವಹಿಸಿದ್ದ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ಸ್ ಆಸ್ಟ್ರೇಲಿಯದ ಅಲಿಸ್ಸಾ ಹೀಲಿ ಗರಿಷ್ಠ ರನ್(225) ಗಳಿಸಿದ್ದಾರೆ. ಈ ಸಾಧನೆಯ ಹಿನ್ನೆಲೆಯಲ್ಲಿ 4 ಸ್ಥಾನ ಮೇಲಕ್ಕೇರಿ 8ನೇ ಸ್ಥಾನ ತಲುಪಿದ್ದಾರೆ. ಹೀಲಿ ಈ ಸಾಧನೆಗೆ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.

ಬೌಲರ್‌ಗಳ ಪೈಕಿ ಪೂನಂ ಯಾದವ್ ಹಾಗೂ ಅನುಜಾ ಪಾಟೀಲ್ ಅಗ್ರ-20ರಲ್ಲಿ ಸ್ಥಾನ ಪಡೆದಿದ್ದಾರೆ. ಪೂನಂ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಅನುಜಾ 6 ಸ್ಥಾನಗಳನ್ನು ಕಳೆದುಕೊಂಡು 20ನೇ ಸ್ಥಾನಕ್ಕೆ ಕುಸಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News