ಇಂದಿನಿಂದ ಚತುರ್ದಿನ ಪಂದ್ಯವನ್ನಾಡಲಿರುವ ಭಾರತ
ಸಿಡ್ನಿ, ನ.27: ಆಸ್ಟ್ರೇಲಿಯದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸುವತ್ತ ಚಿತ್ತವಿರಿಸಿರುವ ಟೀಮ್ ಇಂಡಿಯಾ ಬುಧವಾರದಿಂದ ಆರಂಭವಾಗಲಿರುವ ಏಕೈಕ ಚತುರ್ದಿನ ಪಂದ್ಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ತಂಡವನ್ನು ಎದುರಿಸಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಅಡಿಲೇಡ್‌ನಲ್ಲಿ ಡಿ.6ರಿಂದ ಆರಂಭವಾಗಲಿದೆ.
ನಾಲ್ಕು ದಿನಗಳ ಪಂದ್ಯ ಪ್ರಥಮ ದರ್ಜೆ ಸ್ಥಾನಮಾನ ಹೊಂದಿಲ್ಲದ ಕಾರಣ ಪ್ರವಾಸಿ ತಂಡದ ಎಲ್ಲ ಆಟಗಾರರಿಗೆ ಭಾಗವಹಿಸುವ ಅವಕಾಶವಿದೆ. ಭಾರತಕ್ಕೆ ಟ್ವೆಂಟಿ-20 ಕ್ರಿಕೆಟ್ ಮೂಡ್‌ನಿಂದ ಟೆಸ್ಟ್ ಕ್ರಿಕೆಟ್‌ನತ್ತ ಹೊರಳಲು ಇದೊಂದು ಅವಕಾಶವಾಗಿದೆ. ಈ ಸರಣಿಯ ಬಳಿಕ ಭಾರತ 2019ರ ಏಕದಿನ ವಿಶ್ವಕಪ್ ತನಕ ಸುದೀರ್ಘ ಅವಧಿಯಲ್ಲಿ ಸೀಮಿತ ಓವರ್ ಕ್ರಿಕೆಟ್ ಪಂದ್ಯಗಳನ್ನಾಡಲಿದೆ. ಟ್ವೆಂಟಿ-20 ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದ ಬಳಿಕ ಒಂದು ದಿನ ವಿಶ್ರಾಂತಿ ಪಡೆದಿರುವ ಭಾರತದ ಎಲ್ಲ ಆಟಗಾರರು ಮಂಗಳವಾರ ಮೂರು ಗಂಟೆಗಳ ಕಾಲ ಕಠಿಣ ಅಭ್ಯಾಸ ನಡೆಸಿದರು. ಮುರಳಿ ವಿಜಯ್ ಅವರು ಕೆಎಲ್ ರಾಹುಲ್‌ರೊಂದಿಗೆ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಇದು ಇಬ್ಬರು ಅಗ್ರ ಕ್ರಮಾಂಕದಲ್ಲಿ ಆಡುವ ಸೂಚನೆಯಾಗಿದೆ.