ರಣಜಿ ಟ್ರೋಫಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಮೇಲುಗೈ
ಮೈಸೂರು, ನ.29: ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರ ಸಮಯೋಚಿತ ಬ್ಯಾಟಿಂಗ್(40,100 ಎಸೆತ,5 ಬೌಂಡರಿ)ನೆರವಿನಿಂದ ಆತಿಥೇಯ ಕರ್ನಾಟಕ ತಂಡ ಮಹಾರಾಷ್ಟ್ರದ ವಿರುದ್ಧ ರಣಜಿ ಟ್ರೋಫಿಯ ಮೊದಲ ಇನಿಂಗ್ಸ್‌ನಲ್ಲಿ 73 ರನ್ ಮುನ್ನಡೆ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಮಹಾರಾಷ್ಟ್ರ ತಂಡವನ್ನು 113 ರನ್‌ಗೆ ನಿಯಂತ್ರಿಸಿದ್ದ ಕರ್ನಾಟಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ವಿಶ್ವಾಸದಲ್ಲಿತ್ತು. ಎರಡನೇ ದಿನವಾದ ಗುರುವಾರ 3 ವಿಕೆಟ್‌ಗಳ ನಷ್ಟಕ್ಕೆ 70 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ 84.2 ಓವರ್‌ಗಳಲ್ಲಿ 186 ರನ್ ಗಳಿಸಿ ಆಲೌಟಾಗಿದೆ. ಹೀಗಾಗಿ ಭಾರೀ ಮುನ್ನಡೆ ಸಾಧಿಸುವ ಉದ್ದೇಶ ಈಡೇರಲಿಲ್ಲ.
ಪ್ರವಾಸಿ ತಂಡದ ಪರ ಸತ್ಯಜೀತ್ ಬಚ್ಚಾವ್(3-43) ಯಶಸ್ವಿ ಬೌಲರ್ ಎನಿಸಿಕೊಂಡರೆ, ಸಮದ್ ಫಲ್ಲಾಹ್(2-35) ಹಾಗೂ ಅನುಪಮ್ ಸಂಕ್ಲೇಚ(2-42)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಕರ್ನಾಟಕ ಒಂದು ಹಂತದಲ್ಲಿ 109 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಆಸರೆಯಾದ ಎಸ್.ಗೋಪಾಲ್ ನಾಯಕ ವಿನಯಕುಮಾರ್(26)ಜೊತೆಗೂಡಿ 8ನೇ ವಿಕೆಟ್‌ಗೆ 63 ರನ್ ಜೊತೆಯಾಟ ನಡೆಸಿದರು. ವಿನಯಕುಮಾರ್ ಹಾಗೂ ಗೋಪಾಲ್ ಬೆನ್ನುಬೆನ್ನಿಗೆ ಔಟಾದ ಹಿನ್ನೆಲೆಯಲ್ಲಿ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 200 ರನ್ ಗಡಿ ದಾಟುವ ಮೊದಲೇ ಆಲೌಟಾಯಿತು.
ಅಗ್ರ ಕ್ರಮಾಂಕದಲ್ಲಿ ಆರಂಭಿಕ ಆಟಗಾರ ನಿಶ್ಚಲ್ 39 ರನ್(125 ಎಸೆತ, 4 ಬೌಂಡರಿ)ಗಳಿಸಿದರು. ಇನ್ನುಳಿದಂತೆ ಕೆ.ಅಬ್ಬಾಸ್(15), ಶರತ್(14),ಸಿದ್ಧಾರ್ಥ್(11), ಪವನ್ ದೇಶಪಾಂಡೆ(9)ಹಾಗೂ ಜೆ.ಸುಚಿತ್(9)ವೈಫಲ್ಯ ಅನುಭವಿಸಿದರು. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಮಹಾರಾಷ್ಟ್ರ 34 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 48 ರನ್ ಗಳಿಸಿದೆ. ಋತುರಾಜ್ ಖುರಾನ(18) ಹಾಗೂ ಜೈ ಶಿಲ್ಪ ಪಾಂಡೆ(15)ಸ್ಪಿನ್ನರ್ ಎಸ್.ಗೋಪಾಲ್‌ಗೆ(2-6) ವಿಕೆಟ್ ಒಪ್ಪಿಸಿದರು. ಗಾಯಕ್ವಾಡ್(9) ಹಾಗೂ ಸತ್ಯಜೀತ್ ಬಚ್ಚಾವ್(4) ಕ್ರೀಸ್ ಕಾಯ್ದುಕೊಂಡಿದ್ದಾರೆ.