ರೊನಾಲ್ಡೊ ಐತಿಹಾಸಿಕ ಸಾಧನೆ
ರೋಮ್, ನ.29: ಯುಇಎಫ್‌ಎ ಚಾಂಪಿಯನ್ಸ್ ಲೀಗ್(ಸಿಎಲ್) ‘ಎಚ್’ ಗುಂಪಿನ ಪಂದ್ಯದಲ್ಲಿ (ಸಿಎಲ್)ಇಟಲಿಯ ಜುವೆಂಟಸ್ ತಂಡ ಸ್ಪೇನ್‌ನ ವೆಲೆನ್ಸಿಯಾ ತಂಡವನ್ನು 1-0 ಅಂತರದಿಂದ ಮಣಿಸುವುದರೊಂದಿಗೆ ಇದೇ ಮೊದಲ ಬಾರಿ ಟೂರ್ನಮೆಂಟ್‌ನ ಅಂತಿಮ-16ರ ಸುತ್ತಿಗೆ ತೇರ್ಗಡೆಯಾಗಿದೆ. ಜುವೆಂಟಸ್ ತಂಡವನ್ನು ಪ್ರತಿನಿಧಿಸಿರುವ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಇತಿಹಾಸ ನಿರ್ಮಿಸಿದರು. ರೊನಾಲ್ಡೊ 100 ಸಿಎಲ್ ಪಂದ್ಯಗಳನ್ನು ಜಯಿಸಿದ ಮೊದಲ ಫುಟ್ಬಾಲ್ ಆಟಗಾರನೆಂಬ ಕೀರ್ತಿಗೆ ಭಾಜನರಾದರು.
ಪೋರ್ಚುಗಲ್ ಆಟಗಾರ ರೊನಾಲ್ಡೊ ರಿಯಲ್‌ಮ್ಯಾಡ್ರಿಡ್ ಪರ 71 ಸಿಎಲ್ ಪಂದ್ಯಗಳನ್ನು ಆಡಿದ್ದರೆ ಮ್ಯಾಂಚೆಸ್ಟರ್ ಯುನೈಟೆಡ್ (26) ಹಾಗೂ ಜುವೆಂಟಸ್(3)ಪರ ಈವರೆಗೆ 29 ಪಂದ್ಯಗಳನ್ನಾಡಿದ್ದಾರೆ.
ರೊನಾಲ್ಡೊ 2003ರ ಅಕ್ಟೋಬರ್‌ನಲ್ಲಿ ಮ್ಯಾಂಚೆಸ್ಟರ್ ಪರ ಸ್ಟಟ್‌ಗರ್ಟ್ ವಿರುದ್ಧ ಆಡಿದ್ದ ಮೊತ್ತ ಮೊದಲ ಸಿಎಲ್ ಪಂದ್ಯದಲ್ಲಿ ಸೋತಿದ್ದರು. ಆದರೆ ಆ ನಂತರ ಗ್ಲಾಸ್ಗೊ ರೇಂಜರ್ಸ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಹಿಂದಿರುಗಿ ನೋಡಿಲ್ಲ. ರೊನಾಲ್ಡೊಗಿಂತ ಹೆಚ್ಚು ಚಾಂಪಿಯನ್ಸ್ ಲೀಗ್ ಪಂದ್ಯಗಳನ್ನು ಆಡಿದ ಫುಟ್ಬಾಲ್ ಕ್ಲಬ್‌ಗಳೆಂದರೆ: ರಿಯಲ್ ಮ್ಯಾಡ್ರಿಡ್ (154),ಬಾರ್ಸಿಲೋನ(141), ಬೆಯರ್ನ್ ಮ್ಯೂನಿಚ್(131) ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್(116).