×
Ad

ಕೋಚ್ ಹುದ್ದೆಯಿಂದ ದಿಢೀರ್ ಕೆಳಗಿಳಿಸಿದ್ದಕ್ಕೆ ನೋವಿಗಿಂತಲೂ ಅಚ್ಚರಿಯಾಗಿತ್ತು

Update: 2018-11-29 23:50 IST

ಭುವನೇಶ್ವರ, ನ.29: ರೋಲ್ಯಾಂಟ್ ಒಲ್ಟಮನ್ಸ್ ಪಾಲಿಗೆ ಭಾರತ ಮುಗಿದ ಅಧ್ಯಾಯ. ಆದರೆ, ಡಚ್‌ನ ಲೆಜೆಂಡರಿ ಕೋಚ್ ಒಲ್ಟಮನ್ಸ್‌ಗೆ ಹಾಕಿ ಇಂಡಿಯಾ ದಿಢೀರನೇ ಕೋಚ್ ಹುದ್ದೆಯಿಂದ ಕೆಳಗಿಳಿಸಿರುವ ಕ್ರಮದಿಂದ ನೋವಿಗಿಂತ ಮಿಗಿಲಾಗಿ ಅಚ್ಚರಿಯಾಗಿತ್ತು ಎಂದು ಹೇಳಿದ್ದಾರೆ. 

ಸುಮಾರು 5 ವರ್ಷಗಳ ಕಾಲ ಭಾರತದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಒಲ್ಟಮನ್ಸ್ 2013ರಲ್ಲಿ ಉನ್ನತ ಪ್ರದರ್ಶನ ನಿರ್ದೇಶಕರಾಗಿ ಭಾರತಕ್ಕೆ ಆಗಮಿಸಿದ್ದರು. ನಿರ್ದೇಶಕರಾಗಿ ಭಾರತದ ಹಾಕಿ ತಂಡದ ಬೆಳವಣಿಗೆಗೆ ಶ್ರಮಿಸಿದ್ದ ಒಲ್ಟಮನ್ಸ್ ಬಳಿಕ ಮುಖ್ಯ ಕೋಚ್ ಆಗಿ ನೇಮಕ ಗೊಂಡಿದ್ದರು. ಒಲ್ಟಮನ್ಸ್ ಅವರ ಭಾರತ ಹಾಕಿ ತಂಡದೊಂದಿಗಿದ್ದ 5 ವರ್ಷಗಳ ಸಂಬಂಧ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಹಠಾತ್ತನೇ ಕೊನೆಗೊಂಡಿತು. ಭಾರತ ಪುರುಷರ ಹಾಕಿ ತಂಡ ಕಳಪೆ ಪ್ರದರ್ಶನ ನೀಡುತ್ತಿದೆ ಎಂಬ ಕಾರಣ ನೀಡಿ ರಾಷ್ಟ್ರೀಯ ಹಾಕಿ ಫೆಡರೇಶನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿತ್ತು. ‘‘ಏಕಾಏಕಿ ಹುದ್ದೆಯಿಂದ ಉಚ್ಚಾಟಿಸಿದ್ದಕ್ಕೆ ನನಗೆ ನೋವಾಗಿರಲಿಲ್ಲ. ಅದು ನಮ್ಮ ಕೋಚಿಂಗ್ ಹುದ್ದೆಯ ಭಾಗವಾಗಿದೆ. ಆದರೆ, ಇದರಿಂದ ನನಗೆ ಅಚ್ಚರಿಯಾಗಿದ್ದು ನಿಜ.

ಕೆಲವೊಂದು ಕ್ಷಣದಲ್ಲಿ ಕೆಲವರು ನಿರ್ಣಯ ತೆಗೆದುಕೊಳ್ಳುತ್ತಾರೆ. ಆ ನಿರ್ಧಾರವನ್ನು ನಾವು ಇರುವ ರೀತಿಯಲ್ಲೇ ಸ್ವೀಕರಿಸಬೇಕಾಗುತ್ತದೆ’’ ಎಂದು ಈಗ ನಡೆಯುತ್ತಿರುವ ಹಾಕಿ ವಿಶ್ವಕಪ್‌ನಲ್ಲಿ ಮಲೇಶ್ಯಾ ತಂಡದ ಮುಖ್ಯ ಕೋಚ್ ಆಗಿರುವ ಒಲ್ಟಮನ್ಸ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News