ಐವರು ದಾಂಡಿಗರಿಂದ ಅರ್ಧಶತಕ: ಭಾರತ 358 ರನ್
ಸಿಡ್ನಿ, ನ.29: ಆಸ್ಟ್ರೇಲಿಯ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಮೊದಲು ಅಭ್ಯಾಸ ಪಂದ್ಯ ಎನಿಸಿಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ವಿರುದ್ಧದ ಚತುರ್ದಿನ ಪಂದ್ಯದ ಎರಡನೇ ದಿನವಾದ ಗುರುವಾರ ಭಾರತ 358 ರನ್ ಗಳಿಸಿ ಆಲೌಟಾಗಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆಯಬೇಕಾಗಿದ್ದ ಮೊದಲ ದಿನದ ಪಂದ್ಯ ಮಳೆಗಾಹುತಿಯಾಗಿತ್ತು. ಗುರುವಾರ ನಡೆದ 2ನೇ ದಿನದ ಪಂದ್ಯದಲ್ಲಿ ಅನನುಭವಿ ಆಸ್ಟ್ರೇಲಿಯ ಇಲೆವೆನ್ ವಿರುದ್ಧ ಭಾರತದ ಅಗ್ರ ಕ್ರಮಾಂಕದ ಐವರು ದಾಂಡಿಗರು ಅರ್ಧಶತಕ ಸಿಡಿಸಿದರು. ಆದರೆ, ಕೆ.ಎಲ್. ರಾಹುಲ್ ಅವರ ಕಳಪೆ ಪ್ರದರ್ಶನ ಅಭ್ಯಾಸ ಪಂದ್ಯದಲ್ಲೂ ಮುಂದುವರಿಯಿತು. ಅವರು ಕೇವಲ 3 ರನ್ ಗಳಿಸಿದರು.
ಈ ಅಭ್ಯಾಸ ಪಂದ್ಯ ಪ್ರಥಮ ದರ್ಜೆ ಸ್ಥಾನಮಾನ ಹೊಂದಿಲ್ಲದ ಕಾರಣ ಭಾರತ 14 ಆಟಗಾರರನ್ನು ಆಡಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಪರ ಆರಂಭಿಕ ಆಟಗಾರ ಪೃಥ್ವಿ ಶಾ(66), ವಿರಾಟ್ ಕೊಹ್ಲಿ(64), ಅಜಿಂಕ್ಯ ರಹಾನೆ(56), ಚೇತೇಶ್ವರ ಪೂಜಾರ(54) ಹಾಗೂ ಹನುಮ ವಿಹಾರಿ(53)ಅರ್ಧಶತಕ ಸಿಡಿಸಿ ಭಾರತವನ್ನು ಸುಸ್ಥಿತಿಗೆ ತಲುಪಿಸಿದರು. ರೋಹಿತ್ ಶರ್ಮಾ 40 ರನ್ ಗಳಿಸಿ ಔಟಾದರು.
52 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ ಅರ್ಧಶತಕ ಪೂರೈಸಿದ ಶಾ 2ನೇ ವಿಕೆಟ್‌ಗೆ ಚೇತೇಶ್ವರ ಪೂಜಾರ ಅವರೊಂದಿಗೆ 80 ರನ್ ಜೊತೆಯಾಟ ನಡೆಸಿದರು. 78 ಎಸೆತಗಳಲ್ಲಿ 50 ರನ್ ಪೂರೈಸಿದ ಕೊಹ್ಲಿ 87 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 64 ರನ್ ಗಳಿಸಿ ಆ್ಯರೊನ್ ಹಾರ್ಡ್ಲಿಗೆ ಔಟಾದರು.
ಒಂದು ಹಂತದಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 347 ರನ್ ಗಳಿಸಿದ್ದ ಭಾರತ 358 ರನ್‌ಗೆ ಆಲೌಟಾಯಿತು. ಆರ್.ಅಶ್ವಿನ್, ಮುಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಶೂನ್ಯಕ್ಕೆ ಔಟಾದರು. ರಿಷಭ್ ಪಂತ್ ಔಟಾಗದೆ 11 ರನ್ ಗಳಿಸಿದರು.
ಕ್ರಿಕೆಟ್ ಆಸ್ಟ್ರೇಲಿಯದ ಪರ 19ರ ಹರೆಯದ ಬೌಲರ್ ಆ್ಯರೊನ್ ಹಾರ್ಡ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಗಮನಸೆಳೆದರು. ಕೊಹ್ಲಿ, ರೋಹಿತ್, ಅಶ್ವಿನ್ ಹಾಗೂ ಶಮಿ ಅವರು ಹಾರ್ಡ್ಲಿಗೆ ವಿಕೆಟ್ ಒಪ್ಪಿಸಿದರು.ಜಾಕ್ಸನ್, ರಾಬಿನ್ಸ್, ಫಾಲಿನ್ಸ್ ಹಾಗೂ ಡಿಆರ್ಕಿ ಶಾರ್ಟ್ ತಲಾ 1 ವಿಕೆಟ್ ಪಡೆದರು. ಶಾರ್ಟ್ ತಂಡದಲ್ಲಿರುವ ಏಕೈಕ ಅಂತರ್‌ರಾಷ್ಟ್ರೀಯ ಕ್ರಿಕೆಟಿಗನಾಗಿದ್ದಾರೆ.
ಭಾರತವನ್ನು 358 ರನ್‌ಗೆ ನಿಯಂತ್ರಿಸಿದ ಕ್ರಿಕೆಟ್ ಆಸ್ಟ್ರೇಲಿಯ 2ನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದೆ. ಡಿಆರ್ಕಿ ಶಾರ್ಟ್(10) ಹಾಗೂ ಮ್ಯಾಕ್ಸ್ ಬ್ರಿಯಾಂಟ್(14) ಕ್ರೀಸ್ ಕಾಯ್ದುಕೊಂಡಿದ್ದಾರೆ.